ಪತ್ನಿ ಜತೆ ಅಸಹಜ ಲೈಂಗಿಕತೆ ಅತ್ಯಾಚಾರವಲ್ಲ: ಹೈಕೋರ್ಟ್

Update: 2024-05-04 02:19 GMT

Photo: freepik

ಭೋಪಾಲ್: ವಿವಾಹ ಸಂಬಂಧದ ಅತ್ಯಾಚಾರ ಭಾರತೀಯ ದಂಡಸಂಹಿತೆಯಡಿ ಅಪರಾಧವಲ್ಲ. ಆದ್ದರಿಂದ ಪತ್ನಿಯ ಜತೆಗಿನ ಅಸಹಜ ಲೈಂಗಿಕತೆ ಅತ್ಯಾಚಾರ ಎನಿಸುವುದಿಲ್ಲ. ಇಂಥ ಪ್ರಕರಣಗಳಲ್ಲಿ ಆಕೆಯ ಸಮ್ಮತಿ ಅಪ್ರಸ್ತುತ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಜಿ.ಎಸ್.ಅಹ್ಲುವಾಲಿಯಾ ಈ ಬಗ್ಗೆ ತೀರ್ಪು ನೀಡಿ, ಪರಿತ್ಯಕ್ತ ಪತ್ನಿ ನೀಡಿದ ದೂರಿನ ಮೇರೆಗೆ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಅಸಹಜ ಲೈಂಗಿಕತೆ) ಮತ್ತು 506 (ಅಪರಾಧ ಕುಮ್ಮಕ್ಕು) ಅಡಿಯಲ್ಲಿ ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿದರು.

ಈ ಸಂಬಂಧ ಹಲವು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ಅವರು, ಭಾರತೀಯ ದಂಡಸಂಹಿತೆ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರದ ವ್ಯಾಖ್ಯಾನವನ್ನೂ ನೀಡಿದ್ದಾರೆ. ಪತ್ನಿ 15 ವರ್ಷಕ್ಕಿಂತ ಕೆಳ ವಯಸ್ಸಿನವಳಾಗಿರದಿದ್ದರೆ, ಪತಿ ತನ್ನ ಪತ್ನಿಯ ಒಪ್ಪಿಗೆ ಇಲ್ಲದಿದ್ದರೂ ಆಕೆಯ ಜತೆ ಗುದಸಂಭೋಗ ನಡೆಸಿದರೆ ಅದು ಅತ್ಯಾಚಾರ ಎನಿಸುವುದಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಪತಿ ಸಲ್ಲಿಸಿದ ಅರ್ಜಿಯ ಮಾಹಿತಿಯಂತೆ ಈ ದಂಪತಿ 2019ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಆದರೆ 2020ರ ಫೆಬ್ರುವರಿ ಬಳಿಕ ಪತ್ನಿ ತನ್ನ ತವರು ಮನೆಯಲ್ಲಿ ವಾಸವಿದ್ದಳು. ಪತಿ ಹಾಗೂ ಭಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದು, ಇದು ನ್ಯಾಯಾಲಯದಲ್ಲಿ ಬಾಕಿ ಇದೆ.  ಈ ಮಧ್ಯೆ ಪತ್ನಿ ಅಸಹಜ ಲೈಂಗಿಕತೆ ಬಗ್ಗೆ ದೂರು ದಾಖಲಿಸಿದ್ದಳು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News