×
Ad

ಉತ್ತರ ಪ್ರದೇಶಕ್ಕೆ ತೆರಳುವ ದಾರಿ ಮಧ್ಯದಲ್ಲಿ ಕೇರಳದ ಸೈನಿಕ ನಾಪತ್ತೆ!

Update: 2025-07-16 08:54 IST

ಫರ್ಝೀನ್‌ ಗಫೂರ್‌ | Photo: maktoobmedia.com

ತಿರುವನಂತಪುರಂ: ತ್ರಿಶ್ಶೂರ್ ಜಿಲ್ಲೆಯ ಗುರುವಾಯೂರಿನ ಸೈನಿಕರೊಬ್ಬರು ಉತ್ತರ ಪ್ರದೇಶದಲ್ಲಿ ನಡೆಯಬೇಕಿದ್ದ ತರಬೇತಿಗೆ ತೆರಳುವ ವೇಳೆ ಮಾರ್ಗಮಧ್ಯದಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್‍ಎಂಸಿ) ನರ್ಸಿಂಗ್ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಫರ್ಝೀನ್ ಗಫೂರ್ (28) ಪುಣೆಯಿಂದ ಬರೇಲಿಗೆ ರೈಲಿನಲ್ಲಿ ಪ್ರಮಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ಮಿಲಿಟರಿ ಆಸ್ಪತ್ರೆಯಲ್ಲಿ ಆರಂಭವಾಗಬೇಕಿದ್ದ ಮೂರು ತಿಂಗಳ ತರಬೇತಿಯಲ್ಲಿ ಅವರು ಭಾಗವಹಿಸಬೇಕಿತ್ತು.

ಫರ್ಝೀನ್ ಕೊನೆಯ ಬಾರಿ ಜುಲೈ 10ರಂದು ರಾತ್ರಿ 10.30ಕ್ಕೆ ಪತ್ನಿ ಝರೀನಾ ಅವರಿಗೆ ಮಾತನಾಡಿದ್ದರು. ಮುಂಬೈ ಬಾಂದ್ರಾ- ರಾಮನಗರ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಫೋನ್ ಇದೀಗ ಸಂಪರ್ಕಕ್ಕೆ ಸಿಗುತ್ತಿಲ್ಲ.

ಫರ್ಝೀನ್ ಅವರ ಕಣ್ಮರೆಯ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಗುರುವಾಯೂರಿನ ಸ್ಥಳೀಯ ಶಾಸಕರಿಗೆ, ಕೇಂದ್ರ ಸಚಿವ ಸುರೇಶ್ ಗೋಪಿ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ನೆರವಿಗಾಗಿ ಮನವಿ ಮಾಡಿದ್ದಾರೆ. ಗುರುವಾಯೂರು ಪೊಲೀಸರು ಕೇರಳ ಪೊಲೀಸ್ ಕಾಯ್ದೆ-2011ರ ಅಡಿಯಲ್ಲಿ ಕಣ್ಮರೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ತನಿಖೆಗಾಗಿ ಇಝ್ಝತ್‍ನಗರ ಠಾಣೆಗೆ ವರ್ಗಾಯಿಸಲಾಗಿದೆ.

ಗುರುವಾಯೂರು ಪೊಲೀಸರ ನೆರವಿನಿಂದ ಕುಟುಂಬದವರು ಫರ್ಝೀನ್ ಅವರ ಮೊಬೈಲ್ ಫೋನ್ ಲೊಕೇಶನ್ ಪತ್ತೆ ಮಾಡಿದ್ದು, ಬರೇಲಿಗೆ ಕೆಲ ಕಿಲೋಮೀಟರ್ ಹಿಂದೆ ಇಝ್ಝತ್‍ನಗರ ರೈಲು ನಿಲ್ದಾಣದಲ್ಲಿ ಅವರು ಶುಕ್ರವಾರ ಮುಂಜಾನೆ 4.30ರ ವೇಳೆಗೆ ರೈಲಿನಿಂದ ಇಳಿದಿದ್ದಾರೆ. ರೈಲು ನಿಲ್ದಾಣದಿಂದ 1.3 ಕಿಲೋಮೀಟರ್ ದೂರದ ಪೂರ್ವನಗರದಲ್ಲಿ ಅವರ ಫೋನ್ ಪತ್ತೆಯಾಗಿ ಬಳಿಕ ಆಫ್‍ಲೈನ್ ಆಗಿದೆ.

ಬರೇಲಿ ಆಸುಪಾಸಿನಲ್ಲಿ ಅವರ ಫೋನ್ ಸಂಕೇತಗಳು ಪತ್ತೆಯಾಗಿದ್ದರೂ, ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ ಅಥವಾ ಆ ಬಳಿಕ ಯಾರನ್ನೂ ಸಂಪರ್ಕಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News