ಭಾರತೀಯ ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆ 23 ರಾಷ್ಟ್ರಗಳ 75 ಪ್ರತಿನಿಧಿಗಳ ಆಗಮನ

Update: 2024-05-05 15:24 GMT

ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ: ಜಗತ್ತಿನ ಅತಿ ದೊಡ್ಡ ಚುನಾವಣಾ ಪ್ರಕ್ರಿಯೆಯಾದ ಭಾರತದ ಲೋಕಸಭಾ ಚುನಾವಣೆಯನ್ನು ವೀಕ್ಷಿಸಲು ಭಾರತೀಯ ಚುನಾವಣಾ ಆಯೋಗವು ನೀಡಿದ ಆಹ್ವಾನದ ಮೇರೆಗೆ 23 ರಾಷ್ಟ್ರಗಳ ಚುನಾವಣಾ ನಿರ್ವಹಣಾ ಇಲಾಖೆಗಳ (ಇಎಂಬಿ) 75 ಮಂದಿ ವಿದೇಶಿ ಪ್ರತಿನಿಧಿಗಳು ರವಿವಾರ ಭಾರತಕ್ಕೆ ಆಗಮಿಸಿದ್ದಾರೆ.

ಗಾತ್ರ ಹಾಗೂ ಜನರ ಪಾಲ್ಗೊಳ್ಳುವಿಕೆಯ ಪ್ರಮಾಣದ ದೃಷ್ಟಿಯಿಂದ ಭಾರತೀಯ ಲೋಕಸಭಾ ಚುನಾವಣಾ ಪ್ರಕ್ರಿಯೆ ಅಭೂತಪೂರ್ವವೆಂದು ಭಾರತೀಯ ಚುನಾವಣಾ ಆಯೋಗವು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಹ್ವಾನಿತ ಪ್ರತಿನಿಧಿಗಳು ಭೂತಾನ್, ಮಂಗೋಲಿಯಾ, ಆಸ್ಟ್ರೇಲಿಯ, ಮಡಗಾಸ್ಕರ್, ಫಿಜಿ, ಕಿರ್ಗಿಝ್ ರಿಪಬ್ಲಿಕ್, ರಶ್ಯ,ಮೊಲ್ಡೊವ,ಟ್ಯುನಿಶಿಯಾ, ಸೆಶೆಲ್ಸ್, ಕಾಂಬೊಡಿಯಾ, ನೇಪಾಳ, ಫಿಲಿಪ್ಪೈನ್ಸ್, ಶ್ರೀಲಂಕಾ, ಝಿಂಬಾಬ್ವೆ, ಬಾಂಗ್ಲಾದೇಶ, ಕಝಕಿಸ್ತಾನ, ಜಾರ್ಜಿಯಾ, ಚಿಲಿ, ಉಝ್ಬೆಕಿಸ್ತಾನ, ಮಾಲ್ದೀವ್ಸ್,ಪಪುವಾ, ನ್ಯೂಗಿನಿಯಾ ಹಾಗೂ ನಮಿಬಿಯಾ ರಾಷ್ಟ್ರಗಳ ವಿವಿಧ ಚುನಾವಣಾ ನಿರ್ವಹಣಾ ಸಂಸ್ಥೆಗಳು ಹಾಗೂ ಸಂಘಟನೆಗನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿಕೆ ತಿಳಿಸಿದೆ.

23 ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗೆ ಚುನಾವಣಾ ವ್ಯವಸ್ಥೆ(ಐಎಫ್ಇಎಸ್)ಗಳಿಗಾಗಿನ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರು ಹಾಗೂ ಭೂತಾನ್ ಮತ್ತು ಇಸ್ರೇಲ್‌ ನ ಮಾಧ್ಯಮ ತಂಡಗಳು ಕೂಡಾ ಭಾಗವಹಿಸುತ್ತಿವೆ.

ಅತ್ಯುನ್ನತ ಮಟ್ಟದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ತನ್ನ ಬದ್ಧತೆಯನ್ನು ಈ ಉಪಕ್ರಮವು ಪ್ರದರ್ಶಿಸುತ್ತದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಭಾರತದ ಪ್ರಜಾತಾಂತ್ರಿಕ ಚುನಾವಣೆಯ ಉತ್ಕೃಷ್ಟತೆಗೆ ಪ್ರತ್ಯಕ್ಷ ಸಾಕ್ಷಿಗಳಾಗುವ ಅವಕಾಶವನ್ನು ಈ ಉಪಕ್ರಮವು ಒದಗಿಸುತ್ತದೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಸಂದರ್ಶಕರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಭಾರತೀಯ ಚುನಾವಣಾ ಆಯೋಗವು ಅಂತಾರಾಷ್ಟ್ರೀಯ ಸಹಕಾರವನ್ನು ಪೋಷಣೆಯ ಕಾರ್ಯವನ್ನು ಮುಂದುವರಿಸಿದೆ’’ ಎಂದು ಆಯೋಗದ ಹೇಳಿಕೆ ತಿಳಿಸಿದೆ.

ಮುಖ್ಯ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಹಾಗೂ ಡಾ.ಸುಖಬೀರ್ ಸಿಂಗ್ ಸಂಧು ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆರು ರಾಜ್ಯಗಳಲ್ಲಿ ನಡೆಯುವ ಮತದಾನಗಳನ್ನು ಹಾಗೂ ಚುನಾವಣಾ ಪೂರ್ವ ಸಿದ್ಧತೆಯನ್ನು ವೀಕ್ಷಿಸಲು ಪ್ರತಿನಿಧಿಗಳನ್ನು ಸಣ್ಣ ಗುಂಪುಗಳಾಗಿ ವಿಭಜಿಸಲಾಗುವುದು. ಮೇ 9ರಂದು ಕಾರ್ಯಕ್ರಮವು ಸಮಾರೋಪಗೊಳ್ಳಲಿದೆಯೆಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News