ಗುಜರಾತ್ | ಪ್ರಧಾನಿ ಮೋದಿ ಚುನಾವಣಾ ಪ್ರಚಾರ ತೀವ್ರವಾಗುತ್ತಿದ್ದಂತೆ, ಕ್ಷತ್ರಿಯರ ಕ್ರೋಧಾಗ್ನಿಯನ್ನು ನಂದಿಸುವ ಪ್ರಯತ್ನವೂ ತೀವ್ರ!

Update: 2024-05-02 15:39 GMT

PC : indianexpress.com

ಅಹ್ಮದಾಬಾದ್ : ಕೇಂದ್ರ ಸಚಿವ ಹಾಗೂ ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಷೋತ್ತಮ ರೂಪಾಲಾ ತಮ್ಮ ಸಮುದಾಯದ ವಿರುದ್ಧ ನೀಡಿರುವ ಹೇಳಿಕೆಗಳಿಂದ ಕ್ರುದ್ಧರಾಗಿರುವ ರಾಜ್ಯದ ಕ್ಷತ್ರಿಯರು ಈ ಚುನಾವಣೆಯಲ್ಲಿ ‘ದುರಹಂಕಾರಿ’ ಬಿಜೆಪಿಗೆ ಪಾಠ ಕಲಿಸುವುದಾಗಿ ಪಣ ತೊಟ್ಟಿದ್ದಾರೆ.

ಕ್ಷತ್ರಿಯ ಸಮುದಾಯದ ಪ್ರತಿಭಟನೆಯ ಕೇಂದ್ರಬಿಂದುವಾಗಿರುವ ರಾಜಕೋಟ್‌ನಲ್ಲಿರುವ ಕ್ಷತ್ರಿಯ ಅಸ್ಮಿತಾ ಆಂದೋಲನ ಸಮಿತಿಯ ಹಂಗಾಮಿ ಕಚೇರಿಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜನೆಗಳು ರೂಪುಗೊಳ್ಳುತ್ತಿದ್ದು, ಆಂದೋಲನವು ಈಗ ಕ್ಷತ್ರಿಯರ ಪ್ರಾಬಲ್ಯವಿರುವ ಇತರ ಲೋಕಸಭಾ ಕ್ಷೇತ್ರಗಳಿಗೂ ಹರಡುತ್ತಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರದಿಂದ ರಾಜ್ಯ ಪ್ರವಾಸದಲ್ಲಿದ್ದು, ಬಿರುಸಿನ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷತ್ರಿಯರ ಕ್ರೋಧಾಗ್ನಿಯನ್ನು ನಂದಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಸತತ ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 26 ಸ್ಥಾನಗಳನ್ನು ಗೆಲ್ಲಲು ಬಯಸಿರುವ ಬಿಜೆಪಿಗೆ ಕ್ಷತ್ರಿಯರೊಂದಿಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ನೆರವಾಗಲು ಮೋದಿಯವರ ತವರು ರಾಜ್ಯದಲ್ಲಿ ಅವರ ಮ್ಯಾಜಿಕ್ ಕೆಲಸ ಮಾಡುವುದೇ ಎನ್ನುವುದರ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.

ಈ ನಡುವೆ ಬಿಕ್ಕಟ್ಟು ಸ್ವಲ್ಪ ಮೃದುಗೊಳ್ಳುತ್ತಿರುವಂತೆ ಕಂಡು ಬರುತ್ತಿದೆ. ರಾಜ್ಯದಲ್ಲಿ ತನ್ನ ಮೊದಲ ಚುನಾವಣಾ ರ‍್ಯಾಲಿಗಾಗಿ ಮೋದಿಯವರು ಬುಧವಾರ ಆಗಮಿಸುವ ಕೆಲವೇ ಗಂಟೆಗಳ ಮುನ್ನ ಗುಜರಾತ್ ರಜಪೂತ ಸಮಾಜ ಸಂಘಟನೆಗಳ ಸಮನ್ವಯ ಸಮಿತಿಯು ಪ್ರಧಾನಿ ಹುದ್ದೆಗೆ ಗೌರವ ಸೂಚಕವಾಗಿ ಅವರ ಯಾವುದೇ ಬಹಿರಂಗ ಸಭೆಗಳಲ್ಲಿ ತಾನು ಪ್ರತಿಭಟನೆ ನಡೆಸುವುದಿಲ್ಲ ಎಂದು ಪ್ರಕಟಿಸಿತ್ತು.

ಆದರೆ ರಾಜಕೋಟ್‌ನಲ್ಲಿಯ ಕ್ಷತ್ರಿಯ ಸಮಿತಿಯ ಕಚೇರಿಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜನೆಗಳು ನಿಂತಿಲ್ಲ. ಮಾಜಿ ಬಿಜೆಪಿ ರಾಜಕೋಟ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಭಾ ಝಲಾ ಅವರು ಪ್ರತಿಭಟನೆಗಳನ್ನು ಸಂಯೋಜಿಸುತ್ತಿದ್ದಾರೆ.

ದುರಹಂಕಾರಿ ಬಿಜೆಪಿಗೆ ನಾವು ಪಾಠ ಕಲಿಸಲೇಬೇಕಿದೆ ಎಂದು ಹೇಳಿದ ಝಲಾ ,ರೂಪಾಲಾ ರೋಡ್‌ಶೋಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೆಟ್ಟು ಮಾಡಿದರು. ಕಚೇರಿಯು ರೂಪಾಲಾರನ್ನು ಬಹಿಷ್ಕರಿಸುವಂತೆ ಕರೆ ನೀಡುವ ಪೋಸ್ಟರ್‌ಗಳಿಂದ ತುಂಬಿಹೋಗಿವೆ. ಅವುಗಳ ಸ್ಟಿಕರ್ ಪ್ರತಿಗಳನ್ನು ಸಮುದಾಯದ ಸದಸ್ಯರಿಗೆ ವಿತರಿಸಲಾಗುತ್ತಿದೆ.

20 ಲಕ್ಷ ಮತದಾರರಿರುವ ರಾಜಕೋಟ್ ಕ್ಷೇತ್ರದಲ್ಲಿ ಕೇವಲ 80,000(ಶೇ.4) ರಜಪೂತರು ಇರುವುದರಿಂದ ಈ ಕ್ಷೇತ್ರದಲ್ಲಿ ತನಗೆ ಸಮಸ್ಯೆಯಾಗುವುದಿಲ್ಲ ಎಂದು ಬಿಜೆಪಿ ನಂಬಿಕೊಂಡಿದೆ. ಜಾಮನಗರ ಮತ್ತು ಕಛ್‌ನಲ್ಲಿ ರಜಪೂತರು ಜನಸಂಖ್ಯೆಯ ಶೇ.11ರಷ್ಟಿದ್ದರೆ, ಆನಂದ್‌ನಲ್ಲಿ ಅವರ ಸಂಖ್ಯೆಶೇ.60ರಷ್ಟಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿಯ ರ‍್ಯಾಲಿಗಳಿಗೆ ಪ್ರತಿಭಟನಾನಿರತ ಕ್ಷತ್ರಿಯರು ಅಡ್ಡಿಗಳನ್ನುಂಟು ಮಾಡಿದ್ದಾರೆ.

ಪ್ರತಿಭಟನೆಯು ಈಗ ಕರ್ಣಿ ಸೇನಾ ಸೇರಿದಂತೆ ಹಲವಾರು ಸಂಘಟನೆಗಳನ್ನು ಆಕರ್ಷಿಸಿದೆ. ರಾಜ್ಯದ ಎಲ್ಲ ಕಡೆಗಳಲ್ಲಿಯೂ ಕ್ಷತ್ರಿಯರು ಹರಡಿಕೊಂಡಿದ್ದಾರೆ. ಸಮುದಾಯದ ಪೋಷಕ ದೇವತೆ ‘ಆಶಾಪುರಾ ಮಾ’ ಅವರಿಗೆ ಗೌರವದೊಂದಿಗೆ ಐದು ಕ್ಷತ್ರಿಯ ಧರ್ಮರಥಗಳು ಕ್ಷತ್ರಿಯ ಪ್ರಾಬಲ್ಯದ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ಸಮುದಾಯದ ಮಹಿಳಾ ನಾಯಕರು ವಸತಿ ಸಮುಚ್ಚಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಕ್ಷತ್ರಿಯರ ಬೇಡಿಕೆಗಳಲ್ಲಿ ಈಗ ಭಾವನಗರದ ಅಂದಿನ ಮಹಾರಾಜ ಕೃಷ್ಣಕುಮಾರಸಿನ್ಹ ಗೋಹಿಲ್ ಅವರಿಗೆ ‘ಭಾರತ ರತ್ನ’ವನ್ನು ನೀಡಬೇಕೆನ್ನುವುದು ಸೇರಿಕೊಂಡಿದೆ. ಕ್ಷತ್ರಿಯ ದೊರೆಗಳು ಬ್ರಿಟಿಷರಿಗೆ ಶರಣಾಗಿದ್ದರು ಎಂಬ ರೂಪಾಲಾ ಹೇಳಿಕೆಗಳ ವಿರುದ್ಧ ಕ್ಷತ್ರಿಯರ ಕೋಪವು ಬುಲೆಟ್ ರೈಲು ಯೋಜನೆಯ ವೈಫಲ್ಯ ಮತ್ತು ಸರಕಾರಿ ಗುತ್ತಿಗೆಗಳಲ್ಲಿ ಭ್ರಷ್ಟಾಚಾರದಂತಹ ಇತರ ಕಳವಳಗಳಿಗೂ ಧ್ವನಿ ನೀಡಿದೆ.

ಕ್ಷತ್ರಿಯರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಪ್ರತಿಜ್ಞೆಯನ್ನು ಮಾಡುತ್ತಿದ್ದಾರೆ. ಅವರಿಗೆ ಅದು ಅನಿವಾರ್ಯ,ಬೇರೆ ಆಯ್ಕೆ ಅವರಿಗಿಲ್ಲ ಎಂದು ರಥಯಾತ್ರೆಯ ನೇತೃತ್ವವನ್ನು ವಹಿಸಿರುವ ಜಾಮನಗರದ ಸ್ಥಳೀಯ ಕರ್ಣಿ ಸೇನಾ ಘಟಕದ ಅಧ್ಯಕ್ಷ ಉಪೇಂದ್ರಸಿನ್ಹ ಜಡೇಜಾ ತಿಳಿಸಿದರು.

ರಾಜಕೋಟ್‌ನಲ್ಲಿ ರೂಪಾಲಾರನ್ನು ಗೆಲ್ಲಿಸಲು ಬಿಜೆಪಿ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಕರ್ನಾಟಕದ ಮಾಜಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ವಲ್ಲಭ ಕಠಾರಿಯಾ ಮತ್ತು ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ರೂಪಾಲಾ ಪರವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇವರ ಜೊತೆಗೆ ಹಲವಾರು ಹಿರಿಯ ಬಿಜೆಪಿ ನಾಯಕರು ಕ್ಷತ್ರಿಯರ ಕೋಪವನ್ನು ಶಮನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿಗೆ ಪಾಠ ಕಲಿಸಲು ಪಣ ತೊಟ್ಟಿರುವ ಕ್ಷತ್ರಿಯ ಸಮುದಾಯವು ಮಣಿಯುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News