×
Ad

Peak hourನಲ್ಲಿ ರೈಲಿನ ಬಾಗಿಲ ಹತ್ತಿರ ನಿಲ್ಲುವುದು ನಿರ್ಲಕ್ಷ್ಯವಲ್ಲ: ಬಾಂಬೆ ಹೈಕೋರ್ಟ್

Update: 2025-12-09 21:52 IST

Photo Credit : bombayhighcourt.gov.in

ಮುಂಬೈ, ಡಿ. 9: ನಿಬಿಡ ಅವಧಿಗಳಲ್ಲಿ ಕೆಲಸಕ್ಕೆ ಹೋಗಲು ಉಪನಗರ ರೈಲುಗಳಲ್ಲಿ ಬಾಗಿಲಿನ ಸಮೀಪ ನಿಂತು ಪ್ರಯಾಣಿಸುವವರಿಗೆ ತಮ್ಮ ಪ್ರಾಣಗಳನ್ನು ಈ ರೀತಿಯಾಗಿ ಅಪಾಯಕ್ಕೆ ಒಡ್ಡುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಹಾಗೂ ಇದನ್ನು ನಿರ್ಲಕ್ಷ್ಯ ಎಂಬುದಾಗಿ ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹಾಗೂ ರೈಲು ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ನೀಡಲಾದ ಪರಿಹಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಪ್ರಯಾಣಿಕನು ರೈಲಿನ ಬಾಗಿಲ ಸಮೀಪ ಫೂಟ್ಬೋರ್ಡ್ ನಲ್ಲಿ ನಿಂತಿದ್ದು, ಆತನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂಬ ರೈಲ್ವೇಯ ವಾದವನ್ನು ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರ ಏಕ ನ್ಯಾಯಾಧೀಶರ ಪೀಠವು ಸೋಮವಾರ ತಿರಸ್ಕರಿಸಿತು.

ಸಂತ್ರಸ್ತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿ ರೈಲ್ವೇ ಕೋರಿಕೆಗಳ ನ್ಯಾಯಮಂಡಳಿಯು 2009 ಡಿಸೆಂಬರ್ನಲ್ಲಿ ನೀಡಿದ್ದ ಆದೇಶವನ್ನು ಕೇಂದ್ರ ಸರಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.

2005 ಅಕ್ಟೋಬರ್ 28ರಂದು ಭಾಯಿಂದರ್ನಿಂದ ಮರೀನ್ ಲೈನ್ಸ್ಗೆ ಪ್ರಯಾಣಿಸುತ್ತಿದ್ದ ವೇಳೆ ಸಂತ್ರಸ್ತ ರೈಲಿನಿಂದ ಕೆಳಗೆ ಬಿದ್ದಿದ್ದರು. ಕೆಲವು ದಿನಗಳ ಬಳಿಕ ಅವರು ಕೊನೆಯುಸಿರೆಳೆದಿದ್ದರು.

ಸಂತ್ರಸ್ತನ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂಬ ರೈಲ್ವೇಯ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ವಿರಾರ್- ಚರ್ಚ್ಗೇಟ್ ರೈಲುಗಳು, ವಿಶೇಷವಾಗಿ ಬೆಳಗ್ಗಿನ ನಿಬಿಡ ಅವಧಿಗಳಲ್ಲಿ ತುಂಬಿ ತುಳುಕುತ್ತಿರುತ್ತವೆ ಎಂದು ಹೇಳಿತು. ಹಾಗಾಗಿ, ಯಾವುದೇ ಪ್ರಯಾಣಿಕನಿಗೆ, ಅದರಲ್ಲೂ ಮುಖ್ಯವಾಗಿ ಭಾಯಿಂದರ್ ರೈಲು ನಿಲ್ದಾಣದಲ್ಲಿ ಕಂಪಾರ್ಟ್ಮೆಂಟ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

‘‘ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಹಾಗಾಗಿ, ಬಾಗಲಿನ ಸಮೀಪ ನಿಲ್ಲುವ ಪ್ರಯಾಣಿಕ ನಿರ್ಲಕ್ಷ್ಯ ತೋರಿದ್ದಾನೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಬೇಕು, ಆದರೆ ಬೋಗಿಗಳತ್ತ ಹೋಗುವುದು ತುಂಬಾ ಕಷ್ಟವಾದಾಗ ಆ ಪ್ರಯಾಣಿಕನಿಗೆ ಬಾಗಿಲ ಸಮೀಪ ನಿಂತು ತನ್ನ ಪ್ರಾಣವನ್ನು ಅಪಾಯಕ್ಕೆ ಒಡ್ಡುವುದು ಬಿಟ್ಟು ಬೇರೆ ಆಯ್ಕೆಯಿಲ್ಲ’’ ಎಂದು ನ್ಯಾಯಾಲಯ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News