ದಿಲ್ಲಿ ಭಾರತದ 4ನೇ ಅತ್ಯಂತ ಕಲುಷಿತ ನಗರ, ಅಗ್ರ ಸ್ಥಾನದಲ್ಲಿ ಘಾಝಿಯಾಬಾದ್: CREA ವರದಿ
Photo | PTI
ಹೊಸದಿಲ್ಲಿ: ದೇಶದ ಅತ್ಯಂತ ಕಲುಷಿತ ನಗರಗಳ ನವೆಂಬರ್ ಪಟ್ಟಿಯಲ್ಲಿ ದಿಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (CREA)ನ ವರದಿಯೊಂದು ತಿಳಿಸಿದೆ. ಪಟ್ಟಿಯಲ್ಲಿ ಘಾಝಿಯಾಬಾದ್ ಅಗ್ರ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ನೋಯ್ಡಾ, ಬಹಾದುರ್ ಗಢ, ದಿಲ್ಲಿ, ಹಾಪುರ, ಗ್ರೇಟರ್ ನೋಯಿಡ, ಬಾಘ್ಪತ್, ಸೋನಿಪತ್, ಮೀರತ್ ಮತ್ತು ರೋಹ್ಟಕ್ ನಗರಗಳಿವೆ.
ಕೂಳೆ ಸುಡುವಿಕೆಯಲ್ಲಿ ಗಣನೀಯ ಇಳಿಕೆಯ ಹೊರತಾಗಿಯೂ, ರಾಷ್ಟ್ರ ರಾಜಧಾನಿ ವಲಯದ 29 ನಗರಗಳ ಪೈಕಿ 20 ನಗರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕ ಮಾಲಿನ್ಯ ಮಟ್ಟಗಳನ್ನು ದಾಖಲಿಸಿವೆ. ರಾಷ್ಟ್ರ ರಾಜಧಾನಿ ವಲಯದ ವಾಯು ಮಾಲಿನ್ಯಕ್ಕೆ ಮೂಲ ಕಾರಣ ಪಂಜಾಬ್ ಮತ್ತು ಹರ್ಯಾಣ ಎಂಬುದಾಗಿ ಹಿಂದೆ ಆರೋಪಿಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ರಾಜ್ಯಗಳಲ್ಲಿನ ಕೂಳೆ ಸುಡುವ ಪ್ರಕರಣಗಳ ಸಂಖ್ಯೆಯಲ್ಲಿ 80ರಿಂದ 90 ಶೇಕಡ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ವಾಯು ಗುಣಮಟ್ಟ ನಿಗಾ ಕೇಂದ್ರಗಳ ಪಿಎಮ್2.5ಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಆಧರಿಸಿ CREA ತನ್ನ ನವೆಂಬರ್ 2025ರ ವರದಿಯನ್ನು ಸಿದ್ಧಪಡಿಸಿದೆ. ದೇಶಾದ್ಯಂತ ವಾಯು ಗುಣಮಟ್ಟದಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ವರದಿ ಎತ್ತಿ ತೋರಿಸಿದೆ.
ಅತ್ಯಂತ ಕಲುಷಿತ ನಗರಗಳ ಅಗ್ರ 10ರ ಪಟ್ಟಿಯಲ್ಲಿ ಉತ್ತರಪ್ರದೇಶ ಆರು ನಗರಗಳಿವೆ ಎಂದು ವರದಿ ಹೇಳುತ್ತದೆ. ಇದೇ ಪಟ್ಟಿಯಲ್ಲಿ ಹರ್ಯಾಣದ ಮೂರು ನಗರಗಳು ಮತ್ತು ದಿಲ್ಲಿ ಬರುತ್ತವೆ.
ಅಗ್ರ 10ರ ಪಟ್ಟಿಯಲ್ಲಿರುವ ಎಲ್ಲಾ ನಗರಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪಿಎಮ್2.5 ಮಟ್ಟಗಳು ದಾಖಲಾಗಿವೆ.