ಗುಜರಾತ್ | ಅಕಾಲಿಕ ಮಳೆಯಿಂದ ಹತ್ತಿ ಬೆಲೆ ಕುಸಿತ, ರೇವಾನಿಯಲ್ಲಿ ರೈತ ಆತ್ಮಹತ್ಯೆ
17 ವರ್ಷಗಳಿಂದ ಏರಿಲ್ಲ ಹತ್ತಿಯ ಬೆಲೆ; ಮೂರಾ ಬಟ್ಟೆಯಾದ ರೈತರ ಬದುಕು
Photo Credit: Vijay Soneji
ರೇವಾನಿ (ರಾಜ್‌ಕೋಟ್):ಗುಜರಾತ್ ನ ಸೌರಾಷ್ಟ್ರದಲ್ಲಿ ಹತ್ತಿ ಬೆಲೆ ಕುಸಿತ ಮತ್ತು ಅಕಾಲಿಕ ಮಳೆಯಿಂದ ಉಂಟಾದ ನಷ್ಟದಿಂದ ಒತ್ತಡ ತಾಳಲಾರದೆ ರೇವಾನಿಯ 60 ವರ್ಷದ ರೈತ ಧನ್ ಭಾಯಿ ಜಾದವ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.
ರಾಜ್‌ಕೋಟ್‌ನಿಂದ ಕೇವಲ 100 ಕಿಮೀ ಒಳಗಿರುವ ಈ ಹಳ್ಳಿಯಲ್ಲಿ ರೈತರ ಪರಿಸ್ಥಿತಿಯ ಚಿತ್ರಣ ಮತ್ತೊಮ್ಮೆ ಹೊರ ಬಂದಿದೆ.
ಧನ್ ಭಾಯಿಯ 28 ವರ್ಷದ ಮಗ ಭರತ್ ಜಾದವ್ ತಿಳಿಸಿದಂತೆ, ಅಕ್ಟೋಬರ್ 25ರವರೆಗೆ ಬಂದ ತೀವ್ರ ಅಕಾಲಿಕ ಮಳೆ ಹಾಗೂ ಮಾರುಕಟ್ಟೆಯಲ್ಲಿ ಹತ್ತಿ ದರ ಕುಸಿತದಿಂದ ತಂದೆಗೆ ಭಾರೀ ಮಾನಸಿಕ ಒತ್ತಡ ತಂದಿತ್ತು. “20 ಕಿಲೋ ಹತ್ತಿಗೆ 1,200ರೂ ವಿನಿಂದ 1,300 ರೂ. ಮಾತ್ರ ಸಿಗುತ್ತಿದೆ. ಮಳೆಯಿಂದ ಇಳುವರಿಯೂ ಕುಸಿತವಾಗಿತ್ತು. ಹೇಗೆ ನಷ್ಟವನ್ನು ಭರಿಸುವುದು ಎನ್ನುವುದು ಅವರಿಗೆ ತಿಳಿಯಲಿಲ್ಲ, ಅವರು ಮಾನಸಿಕವಾಗಿ ಕುಗ್ಗಿದರು” ಎಂದು ಭರತ್ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಬೆಳೆ ಹಾನಿ ಪ್ರದೇಶಗಳ ವೈಮಾನಿಕ ಸಮೀಕ್ಷೆಯ ನಂತರ, ಸರಕಾರ 10,000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ನವೆಂಬರ್ 9ರಿಂದ ನೆಲಗಡಲೆ, ಹೆಸರುಕಾಳು, ಉದ್ದು ಮತ್ತು ಸೋಯಾಬೀನ್ MSP ಅಡಿಯಲ್ಲಿ 15,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದಲ್ಲಿ ಖರೀದಿಸುವುದಾಗಿ ತಿಳಿಸಲಾಗಿತ್ತು. ಆದರೆ ಧನಭಾಯಿ ಜಾದವ್ ಅವರ ಕುಟುಂಬಕ್ಕೆ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ.
"ಸರಕಾರದಿಂದ ಯಾರೂ ನಮ್ಮ ಮನೆಗೆ ಬಂದಿಲ್ಲ. ಪರಿಹಾರ ಇಲ್ಲದೆ ಬದುಕು ಸಾಗಿಸಲು ಹೋರಾಟ ಮುಂದುವರಿದಿದೆ ," ಎಂದು ಭರತ್ ಹೇಳಿದರು. ಕುಟುಂಬವು ಹೊಂದಿರುವ ಏಳು ಬಿಘಾ ಭೂಮಿಯಲ್ಲಿ ಹತ್ತಿ, ದ್ವಿದಳ ಧಾನ್ಯಗಳು ಮತ್ತು ಕಡಲೆ ಬೆಳೆಯುವುದರಿಂದ ಸಾಲ ತೀರಿಸಲು ಸಾಧ್ಯವಾಗುವುದೆಂಬ ನಂಬಿಕೆ ಈಗ ಅವರಲ್ಲಿ ಕುಗ್ಗುತ್ತಿದೆ.
ಧನಭಾಯಿಯ ಸ್ನೇಹಿತ ರಾಜುಭಾಯಿಯೂ ಮನಗುಂದಿದ್ದಾರೆ. “ನಾವು ಎಲ್ಲರೂ ದುಡಿಯುತ್ತೇವೆ. ಈ ವರ್ಷ ಹಾನಿ ಅಪೂರ್ವವಾಗಿತ್ತು. ಅವರು ಇಷ್ಟು ತೀವ್ರ ಹೆಜ್ಜೆ ಇಡುತ್ತಾರೆ ಎಂದು ಊಹಿಸಲಿಲ್ಲ. ಮುಂದಿನ ಬಾರಿ ಬೇರೆ ಬೆಳೆ ಪ್ರಯತ್ನಿಸೋಣ ಎಂದು ಹೇಳಲು ಸಮಯವೇ ಸಿಕ್ಕಿಲ್ಲ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹತ್ತಿ ಆಮದು—ರೈತರ ಆರ್ಥಿಕ ಸ್ಥಿತಿಗೆ ಮತ್ತೊಂದು ಹೊಡೆತ
ಅಖಿಲ ಭಾರತ ಕಿಸಾನ್ ಸಭಾ ನಾಯಕ ದಯಾಭಾಯಿ ಗಜೇರಾ ಅವರ ಪ್ರಕಾರ, ಅಕ್ಟೋಬರ್ 25ರ ನಂತರ ರಾಜ್ಯದಲ್ಲಿ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ನಾಲ್ವರು ಹತ್ತಿ ರೈತರು. ಬೆಲೆ ಕುಸಿತಕ್ಕೆ ಕಚ್ಚಾ ಹತ್ತಿ ಆಮದು ಪ್ರಮುಖ ಕಾರಣವೆಂದು ರೈತರು ಹೇಳುತ್ತಿದ್ದಾರೆ.
ವಾಣಿಜ್ಯ ಸಚಿವಾಲಯದ ಮಾಹಿತಿಯಂತೆ, ಈ ಅಕ್ಟೋಬರ್‌ನಲ್ಲಿ ಭಾರತವು 2,069 ಕೋಟಿ ಮೌಲ್ಯದ ಹತ್ತಿಯನ್ನು ಆಮದು ಮಾಡಿದೆ. ಇದು ಕಳೆದ ವರ್ಷಕ್ಕಿಂತ ದ್ವಿಗುಣ. ಮೌಲ್ಯ ಸರಪಳಿಯನ್ನು ಸ್ಥಿರಗೊಳಿಸಲು ಆಮದು ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದರೂ, ಸ್ಥಳೀಯ ರೈತರಿಗೆ ಇದು ಭಾರೀ ದೊಡ್ಡ ಹೊಡೆತ ನೀಡಿದೆ.
MSP ಹೆಸರಿಗಷ್ಟೇ ಉಳಿದ ಭರವಸೆ: ರೈತರ ಆಕ್ರೋಶ:
ಸುರೇಂದ್ರನಗರದ ರೈತ ಮುಖಂಡ ರಾಮ್‌ಕುಭಾಯಿ ಕರ್ಪಡಾ ಅವರು, “ಹತ್ತಿ ಬೆಲೆ 13 ವರ್ಷಗಳಿಂದ ಏರಿಲ್ಲ; ಆದರೆ ಬೀಜ, ಗೊಬ್ಬರ, ಕೀಟನಾಶಕಗಳ ವೆಚ್ಚ ಪ್ರತಿ ವರ್ಷ ಏರುತ್ತಿದೆ. MSP ಕ್ವಿಂಟಲ್‌ಗೆ 7,710 ರೂಪಾಯಿ ಎಂದರೂ, ರೈತರು ಕೇವಲ 4,500–6,000 ರೂಪಾಯಿ ಪಡೆಯುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
APMC ಮಾರುಕಟ್ಟೆಗಳಲ್ಲಿ ಪ್ರಭಾವಿ ವ್ಯಾಪಾರಿಗಳ ಏಕಸ್ವಾಮ್ಯ, ಮತ್ತು ತಾಂತ್ರಿಕ ಕಾರಣ ಹೇಳಿ ಬೆಲೆ ಕಡಿಮೆ ಮಾಡುವ ಕ್ರಮವು ರೈತರ ಆತಂಕವನ್ನು ಹೆಚ್ಚಿಸಿದೆ.
ರೈತರ ಪ್ರತಿಭಟನೆಯ ಸೂಚನೆ
MSP ದೊರೆಯದಿರುವುದನ್ನು ವಿರೋಧಿಸಿ, AAP ರಾಜ್ಯದಾದ್ಯಂತ ರೈತರ ಮಹಾಪಂಚಾಯತ್ ಗಳನ್ನು ಘೋಷಿಸಿದೆ. ಬೋಟಾಡ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗೊಂದಲ ಸೃಷ್ಟಿಯಾಗಿ, 84 ರೈತರು ಬಂಧಿತರಾದ ಘಟನೆ ಕಳವಳ ಮೂಡಿಸಿದೆ.
ಉದ್ಯಮ–ಕೃಷಿ ಕ್ಷೇತ್ರಕ್ಕೆ ದ್ವಿಗುಣ ಹೊಡೆತ
ಜಿನ್ನಿಂಗ್ ಗಿರಣಿಗಳೂ ಕೂಡ ಸಂಕಷ್ಟಕ್ಕೀಡಾಗಿವೆ. ವಿದೇಶಿ ಹತ್ತಿ ಅಗ್ಗವಾಗಿರುವುದರಿಂದ ಸ್ಥಳೀಯ ಉತ್ಪನ್ನ ಖರೀದಿ ಕುಸಿದಿದ್ದು, ಅನೇಕ ಗಿರಣಿಗಳು ಮುಚ್ಚಲಾರಂಭಿಸಿವೆ. ಉದ್ಯಮಿ ಸಾಗರ್ ಪಟೇಲ್ ಅಭಿಪ್ರಾಯಪಟ್ಟಂತೆ, ಬೀಜ ಗುಣಮಟ್ಟ ಸುಧಾರಣೆ ಇಲ್ಲದೆ ಉತ್ಪಾದನೆ ಹೆಚ್ಚಿಸುವುದು ಕಷ್ಟ.
ಬಿಟಿಯಿಂದ ಸಾಂಪ್ರದಾಯಿಕ ಹತ್ತಿಗೆ ವಾಪಸು
ಉತ್ಪಾದನಾ ವೆಚ್ಚ ಕಡಿಮೆ ಇರುವ ಕಾರಣದಿಂದ ಹಲವರು ಮತ್ತೆ ಕಲಾ ಕಪಾಸ್ ಸಾಂಪ್ರದಾಯಿಕ ಬೀಜಗಳಿಗೆ ಹಿಂತಿರುಗುತ್ತಿದ್ದಾರೆ. “ಇದಕ್ಕೆ ಕೀಟನಾಶಕ ಬೇಕಿಲ್ಲ, ನೀರಿನ ಅವಶ್ಯಕತೆ ಕಡಿಮೆ. ವೆಚ್ಚವೂ ಅಷ್ಟೇ ಕಡಿಮೆ,” ಎಂದು ರೈತ ರಾಣಾ ಕೃಪಾಲ್ ಹೇಳಿದರು.
ರೈತ ಆತ್ಮಹತ್ಯೆ—ರಾಜ್ಯ ಸರಕಾರದ ಮೌನದ ಮೇಲೆ ಪ್ರಶ್ನೆಗಳು
ಗಜೇರಾ ಅವರು, “ಉತ್ಪಾದನೆ ಕಳೆದ ವರ್ಷದ 1 ಕೋಟಿ ಬೇಲ್ ಗಳಿಂದ ಈ ವರ್ಷ 65 ಲಕ್ಷಕ್ಕೆ ಕುಸಿಯುತ್ತದೆ. ಆದರೆ ಸರ್ಕಾರ ಆತ್ಮಹತ್ಯೆಗಳ ಬಗ್ಗೆ ಮೌನವಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದರು