ಜು.21ರೊಳಗೆ ಎಲ್ಲ ಬೋಯಿಂಗ್ ವಿಮಾನಗಳ ಇಂಧನ ಸ್ವಿಚ್ ಲಾಕ್ ಗಳ ಪರೀಕ್ಷೆ:ಏರ್ ಲೈನ್‌ಗಳಿಗೆ ಡಿಜಿಸಿಎ ಆದೇಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜು.14: ಬಿ787 ಡ್ರೀಮ್ ಲೈನರ್ ಮತ್ತು ಕೆಲವು ಬಿ737 ಸೇರಿದಂತೆ ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರೀಕ್ಷಿಸುವಂತೆ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ವಾಯುಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಜುಲೈ 21ರೊಳಗೆ ಪರೀಕ್ಷೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಅದು ಸೂಚಿಸಿದೆ. ಈ ವಿಮಾನಗಳನ್ನು ಏರ್ ಇಂಡಿಯಾ ಗ್ರೂಪ್,ಇಂಡಿಗೋ ಮತ್ತು ಸ್ಪೈಸ್ ಜೆಟ್ ನಂತಹ ಸಂಸ್ಥೆಗಳು ಬಳಸುತ್ತಿವೆ.
ಬೋಯಿಂಗ್ ಕಂಪನಿಯ ವಿವಿಧ ಮಾದರಿಗಳ ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವೈಶಿಷ್ಟ್ಯವು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಕುರಿತು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ) ಡಿ.17,2018ರಂದು ವಿಶೇಷ ಬುಲೆಟಿನ್ ಬಿಡುಗಡೆಗೊಳಿಸಿತ್ತು.
ಇದಕ್ಕೆ ಅನುಗುಣವಾಗಿ ಅಂತರರಾಷ್ಟ್ರೀಯ ಮತ್ತು ದೇಶಿಯ ಸೇರಿದಂತೆ ಹಲವಾರು ವಾಯುಯಾನ ಸಂಸ್ಥೆಗಳು ತಮ್ಮ ವಿಮಾನಗಳ ತಪಾಸಣೆಯನ್ನು ಆರಂಭಿಸಿರುವುದು ಡಿಜಿಸಿಎ ಗಮನಕ್ಕೆ ಬಂದಿದೆ. ಬಾಧಿತ ವಿಮಾನಗಳ ಎಲ್ಲ ವಾಯುಯಾನ ನಿರ್ವಾಹಕರು ಜು.21ರೊಳಗೆ ತಪಾಸಣೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಡಿಜಿಸಿಎ ತನ್ನ ಆದೇಶದಲ್ಲಿ ತಿಳಿಸಿದೆ.
ನಿರಂತರ ವಾಯುಯಾನ ಅರ್ಹತೆ ಮತ್ತು ಯಾನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯವಾಗಿದೆ ಎಂದು ಅದು ಹೇಳಿದೆ.
ಕಳೆದ ತಿಂಗಳು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತ ಸಂದರ್ಭದಲ್ಲಿ ಇಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು ಎಂದು ವಿಮಾನ ಅಪಘಾತ ತನಿಖಾ ಘಟಕ(ಎಎಐಬಿ)ದ ಪ್ರಾಥಮಿಕ ತನಿಖಾ ವರದಿಯು ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಯಾನ ಸಂಸ್ಥೆಗಳು ಮಾತ್ರವಲ್ಲ,ಪ್ರಮುಖ ಅಂತರರಾಷ್ಟ್ರೀಯ ವಾಯುಯನ ಸಂಸ್ಥೆಗಳೂ ತಮ್ಮ ಬೋಯಿಂಗ್ 787 ವಿಮಾನಗಳ ಇಂಧನ ಸ್ವಿಚ್‌ಗಳ ಲಾಕಿಂಗ್ ವ್ಯವಸ್ಥೆಯ ತಪಾಸಣೆ ನಡೆಸಲು ಆರಂಭಿಸಿವೆ.