ಮುಸ್ಲಿಮರ ವಿರುದ್ಧ ಬಿಜೆಪಿ ಬಹಿರಂಗವಾಗಿ ದ್ವೇಷ ಹರಡುತ್ತಿದ್ದರೂ ಮೌನ ಪಾಲಿಸುತ್ತಿರುವ ಚುನಾವಣಾ ಆಯೋಗ

Update: 2024-05-06 10:48 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಬಿಜೆಪಿಯ ಕರ್ನಾಟಕ ಘಟಕ ಶನಿವಾರ (ಮೇ 4) ತನ್ನ ಎಕ್ಸ್ ಖಾತೆಯಲ್ಲಿ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡುವ ಭರದಲ್ಲಿ ಮುಸ್ಲಿಮರನ್ನು ಕೆಟ್ಟದಾಗಿ ತೋರಿಸುವ ಕಾರ್ಟೂನ್‌ ವಿಡಿಯೋ ಹಂಚಿ ಎರಡು ದಿನ ಕಳೆದರೂ ಭಾರತದ ಚುನಾವಣಾ ಆಯೋಗವು ಮೌನವಾಗಿದೆ ಎಂದು thewire.in ವರದಿ ಮಾಡಿದೆ.

ಒಬಿಸಿ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳಿಗೆ ಹೋಗಬೇಕಾದ ಅನುದಾನವನ್ನು ಕೇವಲ ಮುಸ್ಲಿಮರಿಗೆ ಮಾತ್ರ ಕಾಂಗ್ರೆಸ್‌ ನೀಡಲಿದೆ ಎಂದು ಬಿಂಬಿಸುವ ಕಾರ್ಟೂನ್‌ ಅನ್ನು ಬಿಜೆಪಿ ಹಂಚಿಕೊಂಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸಮುದಾಯದೊಳಗೆ ದ್ವೇಷ ಹರಡುವಂತಹ ಕಾರ್ಟೂನ್‌ ಅನ್ನು ಬಿಜೆಪಿ ಹಂಚಿಕೊಳ್ಳುತ್ತಿದೆ. ಆದರೂ, ಆಯೋಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಬಹಿರಂಗವಾಗಿ ಕೋಮುವಾದಿ ಪ್ರಚಾರವನ್ನು ಮುಂದುವರೆಸುತ್ತಾ, "ಎಚ್ಚರ..ಎಚ್ಚರ..ಎಚ್ಚರ..!" ಎಂಬ ಶೀರ್ಷಿಕೆಯ ಈ ಆ್ಯನಿಮೇಟೆಡ್ ವಿಡಿಯೊದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಂಗ್ಯಚಿತ್ರಗಳಿವೆ. ಈ ಇಬ್ಬರು ಮುಖಂಡರ ಜತೆಗೆ ಹಕ್ಕಿ ಗೂಡಿನಲ್ಲಿ ಮುಸ್ಲಿಂ ಎಂದು ಬರೆದ ಒಂದು ಮೊಟ್ಟೆ ಇಡಲಾಗಿದೆ. ಇದರ ಪಕ್ಕ ಎಸ್ಸಿ, ಎಸ್ಟಿ ಮತ್ತು ಓಬಿಸಿ ಎಂದು ಬರೆದ ಮೂರು ಮೊಟ್ಟೆಗಳಿವೆ. ರಾಹುಲ್ ಗಾಂಧಿ ಮುಸ್ಲಿಂ ಟೋಪಿ ಧರಿಸಿದ ಹಕ್ಕಿಗೆ ಮಾತ್ರ ಉಣಿಸುತ್ತಿರುವ ದೃಶ್ಯವಿದೆ. ಮುಸ್ಲಿಂ ಮೊಟ್ಟೆಯಿಂದ ಹೊರ ಬಂದ ಮರಿ, ದೈತ್ಯಾಕಾರವಾಗಿ ಬೆಳೆದು ಇತರ ಮೂರು ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ತಳ್ಳುತ್ತಿರುವಂತೆ ಚಿತ್ರಿಸಲಾಗಿದೆ.

ಈ ವಿಡಿಯೋ ಕುರಿತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅದರ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಕರ್ನಾಟಕ ಬಿಜೆಪಿಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ವಿರುದ್ಧ ಕಾಂಗ್ರೆಸ್ ತನ್ನ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಅಧ್ಯಕ್ಷ ರಮೇಶ್ ಬಾಬು ಮೂಲಕ ಚುನಾವಣಾ ಆಯೋಗಕ್ಕೆ ರವಿವಾರ ದೂರು ಸಲ್ಲಿಸಿದೆ.

“ಬಿಜೆಪಿ ಕೃತ್ಯವು ಉದ್ದೇಶಪೂರ್ವಕವಾಗಿ ಗಲಭೆಯನ್ನು ಪ್ರಚೋದಿಸುವ ಮತ್ತು ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಸ್ಪಷ್ಟವಾಗಿದ್ದು ಮತ್ತು ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರನ್ನು ಬೆದರಿಸುವುದು ಮತ್ತು ಎಸ್‌ಸಿ/ಎಸ್ಟಿ ಸಮುದಾಯ ಸದಸ್ಯರ ವಿರುದ್ಧ ದ್ವೇಷವನ್ನು ಉಂಟುಮಾಡುವುದರ ಜೊತೆಗೆ ಸೌಹಾರ್ದತೆ ಕದಡಲು ಪೂರ್ವಾಗ್ರಹ ಹರಡಲಾಗುತ್ತಿದೆ. ಆದ್ದರಿಂದ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಪ್ರಾರಂಭಿಸುವುದು ನ್ಯಾಯಯುತ ಮತ್ತು ಅವಶ್ಯಕವಾಗಿದೆ” ಎಂದು ರಮೇಶ್ ಬಾಬು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳ ಹಾಗೂ ವಿಭಜಕ ಕ್ರಮಗಳ ವಿರುದ್ಧ ಚುನಾವಣಾ ಆಯೋಗ ಎಚ್ಚರಿಕೆ ನೀಡಿದ್ದರೂ ಕೂಡಾ, ಚುನಾವಣಾ ಪ್ರಚಾರದಲ್ಲಿ ಧರ್ಮವನ್ನು ಬಳಸುವ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗವು ಇದುವರೆಗೂ ಮುಂದಾಗಿಲ್ಲ.

ಆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, “ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮನ್ನು ಟೀಕಿಸುವುದು ಸೇರಿದಂತೆ ಯಾರನ್ನೂ ಟೀಕಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನಮಗೆ ಗೊತ್ತಿದೆ. ನಾವು ತಪ್ಪು ಮಾಡುತ್ತಿದ್ದರೆ ನಮ್ಮನ್ನು ಟೀಕಿಸಿ. ಆದರೆ ಸತ್ಯವನ್ನು ಆಧರಿಸಿರದ ಸುಳ್ಳು ಸುದ್ದಿಗಳನ್ನು ಹರಡಲು ನಿಮಗೆ ಅವಕಾಶ ಇಲ್ಲ. ಏಕೆಂದರೆ ಇದು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು. ಇದು ವದಂತಿಗಳನ್ನು ಹರಡುತ್ತದೆ. ಇದರ ವಿರುದ್ಧ ನಾವು ಸೂಚನೆಗಳನ್ನು ನೀಡಿದ್ದೇವೆ ಮತ್ತು ಕ್ರಮಗಳನ್ನು ತೆಗೆಯುತ್ತೇವೆ” ಎಂದು ಹೇಳಿದ್ದರು.

ಮತಗಳನ್ನು ಪಡೆಯಲು ಜಾತಿ ಅಥವಾ ಕೋಮು ಭಾವನೆಗಳ ಅಡಿಯಲ್ಲಿ ಮನವಿ ಮಾಡುವುದನ್ನು ಮಾದರಿ ನೀತಿ ಸಂಹಿತೆಯು ಸ್ಪಷ್ಟವಾಗಿ ನಿರ್ಬಂಧಿಸುತ್ತದೆ. ಭಾರತದಲ್ಲಿ ಚುನಾವಣೆಗಳನ್ನು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಅಡಿಯಲ್ಲಿ, ಕಾಯಿದೆಯ ಸೆಕ್ಷನ್ 123 (3) ರ ಅಡಿಯಲ್ಲಿ ಮತಗಳನ್ನು ಪಡೆಯಲು ಧರ್ಮದ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಚುನಾವಣಾ ಆಯೋಗದ ಹೊಸ ನಿಯಮಗಳ ಅಡಿಯಲ್ಲಿ, ಐಟಿ ಕಾಯಿದೆಯ ಸೆಕ್ಷನ್ 79 (3) (ಬಿ) ಅಡಿಯಲ್ಲಿ, ಎಲ್ಲಾ ರಾಜ್ಯಗಳಲ್ಲಿ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಪ್ರತಿ ರಾಜ್ಯಕ್ಕೆ ಅಧಿಕಾರವಿದೆ ಮತ್ತು ಅದಕ್ಕಾಗಿ ಅಧಿಕಾರಿಗಳನ್ನು ಸರಿಯಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದರು.

“ನಮ್ಮ ವ್ಯವಸ್ಥೆಗಳು ವಾಸ್ತವಾಂಶಗಳ ಮೂಲಕ ಪ್ರತಿಕ್ರಿಯಿಸುತ್ತವೆ. ಶಾಂತಿ ಭಂಗ ತರುವ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಮತ್ತು ವಾಸ್ತವಾಂಶಗಳನ್ನು ಆಧರಿಸಿರದ ಮತ್ತು ನಕಲಿ ನಿರೂಪಣೆಯನ್ನು ಯಾರಾದರೂ ಮಾಡಲು ಪ್ರಯತ್ನಿಸುತ್ತಿದ್ದರೆ ನಾವು ಮೌನವಾಗಿರುವುದಿಲ್ಲ, ಬದಲು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ನಮ್ಮ ವೆಬ್‌ಸೈಟ್ ನಲ್ಲಿ ಮಿಥ್ ವರ್ಸಸ್ ರಿಯಾಲಿಟಿಯನ್ನು (ಸುಳ್ಳು vs ಸತ್ಯ) ನಾವು ಶೀಘ್ರದಲ್ಲೇ ಪ್ರಾರಂಭಿಸುತ್ತೇವೆ” ಎಂದು ಹೇಳಿದ್ದರು.

ಅಂದಿನಿಂದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಿಥ್ ವರ್ಸಸ್ ರಿಯಾಲಿಟಿ ಅನ್ನು ಪ್ರಾರಂಭಿಸಲಾಗಿದೆ, ಆದರೆ ಅಲ್ಲಿ ಬಿಜೆಪಿಯ ಈ ವೀಡಿಯೊಗಳು ಮತ್ತು ಅದರ ಬಗ್ಗೆ ಯಾವುದೇ ಉಲ್ಲೇಖವನ್ನು ಕೂಡಾ ಮಾಡಲಾಗಿಲ್ಲ.

ಇದೇ ವಿಡಿಯೋವನ್ನು ಮಂಗಳವಾರ (ಏಪ್ರಿಲ್ 30) ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿತ್ತು. ನಂತರ ಅಲ್ಲಿಂದ ಇದನ್ನು ಅಳಿಸಿ ಹಾಕಲಾಗಿತ್ತು. ಆದರೆ, ಈ ವಿಡಿಯೋವನ್ನು ಪಕ್ಷವೇ ತೆಗೆದುಹಾಕಿದೆಯೇ ಅಥವಾ ಇನ್‌ಸ್ಟಾಗ್ರಾಮ್‌ ತೆಗೆದುಹಾಕಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬಿಜೆಪಿ ಕರ್ನಾಟಕ ಶನಿವಾರ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ ಮತ್ತು ಕಳೆದ ತಿಂಗಳು ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಹ್ಯಾಂಡಲ್ ಅಪ್‌ಲೋಡ್ ಮಾಡಿದ ಎರಡೂ ವೀಡಿಯೊಗಳು, ಕಾಂಗ್ರೆಸ್ ಚುನಾಯಿತವಾದರೆ ಮುಸ್ಲಿಮರಿಗೆ ಹಿಂದೂ ಸಂಪತ್ತು ಮತ್ತು ಆಸ್ತಿಯನ್ನು ಹಂಚುತ್ತದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಸಮರ್ಥಿಸುತ್ತದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಸ್‌ಸಿ/ಎಸ್‌ಟಿ/ಒಬಿಸಿಗಳ ಹಕ್ಕುಗಳನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡಲಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂಬ ಮೋದಿಯವರ ಇತ್ತೀಚಿನ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ಈ ವೀಡಿಯೊಗಳು ಕೂಡ ಪ್ರತಿಪಾದಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News