×
Ad

30 ಕೋಟಿ ರೂ. ವಂಚನೆ ಪ್ರಕರಣ: ಖ್ಯಾತ ನಿರ್ದೇಶಕ ವಿಕ್ರಂ ಭಟ್ ಬಂಧನ

Update: 2025-12-07 23:33 IST

Photo Credit: X/@MissMalini

ಮುಂಬೈ: 30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್‌ ಅನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಉದಯ್‌ಪುರ್‌ನ ಇಂದಿರಾ ಸಮೂಹ ಸಂಸ್ಥೆಗಳ ಮಾಲಕ ಡಾ. ಅಜಯ್ ಮುರ್ದಿಯಾ ದೂರುದಾರರಾಗಿದ್ದಾರೆ.

ನಿರ್ಮಾಪಕ ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಅನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದ ನಂತರ, ಪೊಲೀಸರು ದಂಪತಿಯನ್ನು ಉದಯ್‌ಪುರ್‌ಗೆ ಕರೆ ತರಲಿದ್ದಾರೆ. ಇದಕ್ಕೂ ಮುನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳಿಗೆ ಎರಡನೆಯ ಬಾರಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಡಿಸೆಂಬರ್ 8ರೊಳಗೆ ಪೊಲೀಸರೆದುರು ಹಾಜರಾಗುವಂತೆ ಅವರಿಗೆಲ್ಲ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು.

ಜೀವನಚಿತ್ರ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವೊಂದರಲ್ಲಿ ನಡೆದಿದೆಯೆನ್ನಲಾದ 30 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಕ್ರಂ ಭಟ್, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಎಫ್ಐಆರ್‌ನಲ್ಲಿ ದಾಖಲಾಗಿರುವ ಅಂಶಗಳು ಸಂಪೂರ್ಣವಾಗಿ ತಪ್ಪಾಗಿದ್ದು, ಪೊಲೀಸರನ್ನು ದಾರಿ ತಪ್ಪಿಸಲಾಗಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದರು.

ಹಣಕಾಸು ಅವ್ಯವಹಾರಗಳನ್ನು ನಡೆಸಿದ್ದಾರೆ ಹಾಗೂ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಿಕ್ರಂ ಭಟ್ ಹಾಗೂ ಅವರ ಸಹಚರರ ವಿರುದ್ಧ ಇಂದಿರಾ ಐವಿಎಫ್ ಸಂಸ್ಥಾಪಕ ಡಾ. ಅಜಯ್ ಮುರ್ದಿಯಾ ಉದಯ್‌ಪುರ್ ಜಿಲ್ಲೆಯ ಭೂಪಾಲ್‌ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನನ್ನ ದಿವಂಗತ ಪತ್ನಿಯ ಜೀವನಾಧಾರಿತ ಚಲನಚಿತ್ರ ನಿರ್ಮಿಸಿದರೆ, ಆ ಚಿತ್ರವು ಅಂದಾಜು 200 ಕೋಟಿ ರೂ. ಲಾಭ ತಂದುಕೊಡುತ್ತದೆ ಎಂದು ನನ್ನನ್ನು ನಂಬಿಸಿ, ಹಣ ಹೂಡಿಸಲಾಗಿತ್ತು ಎಂದು ಎಫ್ಐಆರ್‌ನಲ್ಲಿ ಡಾ. ಅಜಯ್ ಮುರ್ದಿಯಾ ಆರೋಪಿಸಿದ್ದಾರೆ. ದೂರಿನಲ್ಲಿ ಮೆಹಬೂಬ್ ಮತ್ತು ದಿನೇಶ್ ಕಟಾರಿಯಾ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News