ಪಾಕಿಸ್ತಾನದ ಯುವತಿಗೆ ಚೆನ್ನೈನಲ್ಲಿ ಹೃದಯ ಕಸಿ ಶಸ್ತ್ರಚಿಕಿತ್ಸೆ

Update: 2024-04-28 15:51 GMT

                                                                                            ಆಯೆಶಾ ರಶಾನ್ | PC : PTI 

ಚೆನ್ನೈ: ಪಾಕಿಸ್ತಾನದ 19 ವರ್ಷದ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಯು ಹೊಸ ಜೀವನ ನೀಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಿದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯ ಹೃದಯ ತಮಗೆ ಸರಿ ಹೊಂದುತ್ತದೆ ಎಂಬ ಮಾಹಿತಿಯಂತೆ ಭಾರತಕ್ಕೆ ಬಂದ ಆಯೆಶಾ ರಶಾನ್ ಹೊಸ ಜೀವನ ಪಡೆದಿದ್ದಾರೆ. ಜನವರಿಯಲ್ಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಎಪ್ರಿಲ್‌ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

2014ರಲ್ಲಿ ಆಯೆಶಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಆಗ ಅವರ ಹೃದಯ ಕಳಪೆ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿತ್ತು ಎಂದು ಹೃದಯ ವಿಜ್ಞಾನ ಮತ್ತು ಶ್ವಾಸಕೋಶ ಕಸಿ ಹಾಗೂ ಮೆಕಾನಿಕ್ ಸರ್ಕ್ಯುಲೇಟರಿ ಸಪೋರ್ಟ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್. ಬಾಲಕೃಷ್ಣನ್ ಹೇಳಿದ್ದಾರೆ.

'ಯುವತಿ ಇಲ್ಲಿಗೆ ಬಂದಾಗ ಹೃದಯಾಘಾತದಿಂದ ತೀವ್ರ ಅಸ್ವಸ್ಥರಾಗಿದ್ದರು. ರಕ್ತದ ಪರಿಚಲನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ತಾತ್ಕಾಲಿಕ ಹೃದಯದ ಪಂಪ್ ಅಳವಡಿಸಿದ್ದೆವು. ಬಳಿಕ ಆಕೆ ಚೇತರಿಸಿಕೊಂಡು ವಾಪಸ್ ತೆರಳಿದ್ದರು. ಕೆಲ ವರ್ಷಗಳ ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟು ಹೃದಯಾಘಾತವಾಗಿತ್ತು. ಬಳಿಕ, ಸೋಂಕು ತಗುಲಿ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ.

‘ವೀಸಾ ಪಡೆಯುವುದೂ ಬಹಳ ಕಷ್ಟವಾಯಿತು. ಆಕೆಗೆ ತಾಯಿ ಮಾತ್ರವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಆಸ್ಪತ್ರೆ ದಾಖಲಾತಿ ಸೇರಿದಂತೆ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳಬೇಕಾಯಿತು’ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

“ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಹಣ ಹೊಂದಿಸುವುದೇ ಸವಾಲಾಗಿತ್ತು. ಟ್ರಸ್ಟ್‌, ದಾನಿಗಳ ಸಹಾಯ, ನಮ್ಮ ಕೈಲಿದ್ದ ಹಣವನ್ನೂ ಹಾಕಿದೆವು. ಇದೊಂದು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಏನು ಬೇಕಾದರೂ ಆಗಬಹುದಿತ್ತು’ ಎಂದರು.

ಫ್ಯಾಶನ್ ಡಿಸೈನರ್ ಆಗ ಬಯಸುವ ಆಯೆಶಾ, ವೀಸಾ ಕೊಟ್ಟು ಚಿಕಿತ್ಸೆಗೆ ಸ್ಪಂದಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಪಾಕಿಸ್ತಾನದಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಭಾರತದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಆಯೆಶಾ ತಾಯಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News