"ಕೆಲವು ಕುಸಿದು ಬೀಳುತ್ತಿವೆ, ಇನ್ನು ಕೆಲವು ಬೆಂಕಿಗೆ ಆಹುತಿಯಾಗುತ್ತಿವೆ": ರಾಜಸ್ಥಾನದ ಸರಕಾರಿ ಕಟ್ಟಡಗಳಿಗೆ ಏನಾಗುತ್ತಿದೆ ಎಂದು ಪ್ರಶ್ನಿಸಿದ ಹೈಕೋರ್ಟ್
ರಾಜಸ್ಥಾನ ಹೈಕೋರ್ಟ್ | Photo Credit :ecommitteesci.gov.in
ಜೈಪುರ: ರಾಜಸ್ಥಾನದಲ್ಲಿ ಕೆಲವು ಸರಕಾರಿ ಕಟ್ಟಡಗಳು ಕುಸಿದು ಬೀಳುತ್ತಿರುವುದು ಹಾಗೂ ಕೆಲ ಕಟ್ಟಡಗಳಿಗೆ ಬೆಂಕಿ ಬೀಳುತ್ತಿರುವ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ ರಾಜಸ್ಥಾನ ಹೈಕೋರ್ಟ್, ರಾಜ್ಯದಲ್ಲಿ ಸರಕಾರಿ ಕಟ್ಟಡಗಳಿಗೇನಾಗುತ್ತಿದೆ ಎಂದು ಪ್ರಶ್ನಿಸಿದೆ.
ರವಿವಾರ ರಾತ್ರಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು, ತೀವ್ರ ನಿಗಾ ಘಟಕದಲ್ಲಿದ್ದ ಆರು ಮಂದಿ ರೋಗಿಗಳು ಮೃತಪಟ್ಟ ಬೆನ್ನಿಗೇ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ.
ಜುಲೈ ತಿಂಗಳಲ್ಲಿ ಝಲ್ವಾರ್‌ನಲ್ಲಿನ ಸರಕಾರಿ ಶಾಲೆಯ ಕಟ್ಟಡವೊಂದು ಕುಸಿದು ಬಿದ್ದು, ಏಳು ಮಂದಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದ ಪ್ರಕರಣದ ಕುರಿತು ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ಆತಂಕ ವ್ಯಕ್ತಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಮಹೇಂದ್ರ ಕುಮಾರ್ ಗೋಯಲ್ ಹಾಗೂ ನ್ಯಾ. ಅಶೋಕ್ ಕುಮಾರ್ ಜೈನ್‌ರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, "ಸರಕಾರಿ ಕಟ್ಟಡಗಳಿಗೆ ಏನಾಗುತ್ತಿದೆ? ಕೆಲವು ಕುಸಿದು ಬೀಳುತ್ತಿದ್ದರೆ, ಮತ್ತೆ ಕೆಲವು ಕಟ್ಟಡಗಳಿಗೆ ಬೆಂಕಿ ಬೀಳುತ್ತಿದೆ" ಎಂದು ಪ್ರಶ್ನಿಸಿತು.
ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು, ವಿಶೇಷವಾಗಿ ಶಾಲಾ ಕಟ್ಟಡಗಳ ದುರಂತ ತಪ್ಪಿಸಲು ಅಕ್ಟೋಬರ್ 9ರೊಳಗೆ ಸುರಕ್ಷತಾ ನೀಲನಕ್ಷೆಯನ್ನು ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚಿಸಿತು.
ಈ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ರಾಜೇಂದ್ರ ಪ್ರಸಾದ್, "ಅಸುರಕ್ಷಿತವಾಗಿರುವ ಶಾಲಾ ಕಟ್ಟಡಗಳಿಂದ ವಿದ್ಯಾರ್ಥಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಹಾಗೂ ಶಾಲಾ ಕಟ್ಟಡಗಳ ದುರಸ್ತಿ ಮತ್ತು ಮರು ನಿರ್ಮಾಣಕ್ಕಾಗಿ ಅನುದಾನ ಮಂಜೂರು ಮಾಡಲಾಗಿದೆ" ಎಂದು ನ್ಯಾಯಾಲಯಕ್ಕೆ ತಿಳಿಸಿದರು.