ಬಿಜೆಪಿ ಆಡಳಿತದಲ್ಲಿ ಈಡಿ ದಾಳಿ, ಆಸ್ತಿ ಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಏರಿಕೆ

Update: 2024-04-17 16:09 GMT

PC : PTI 

ಹೊಸದಿಲ್ಲಿ : 2014ರಿಂದೀಚೆಗೆ ಕಳೆದ ಹತ್ತು ವರ್ಷಗಳಲ್ಲಿ ಕಪ್ಪು ಹಣ ಬಿಳುಪು ಕಾಯ್ದೆಯಡಿ ಜಾರಿ ನಿರ್ದೇಶನಾಲಯ(ಈಡಿ) ನಡೆಸಿದ ಶೋಧ ಕಾರ್ಯಾಚರಣೆಯ ಪ್ರಮಾಣವು ಅದರ ಹಿಂದಿನ ದಶಕದಲ್ಲಿದ್ದುದಕ್ಕಿಂತ 86 ಪಟ್ಟು ಅಧಿಕವಾಗಿದೆ ಹಾಗೂ ಆಸ್ತಿಗಳ ಜಪ್ತಿ ಪ್ರಮಾಣದಲ್ಲಿ 25 ಪಟ್ಟು ಏರಿಕೆಯಾಗಿದೆ.

ಕಳೆದೊಂದು ದಶಕದಲ್ಲಿ ಜಾರಿ ನಿರ್ದೇಶನಾಲಯದ ಕಾರ್ಯಾಚರಣೆಯು, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನ್ನ ಪ್ರತಿಸ್ಪರ್ಧಿಗಳು ಹಾಗೂ ಮತ್ತಿತರರ ವಿರುದ್ಧ ಅನುಸರಿಸುತ್ತಿರುವ ದಮನಕಾರಿ ತಂತ್ರಗಾರಿಕೆಗಳ ಭಾಗವಾಗಿದೆ ಎಂದು ಪ್ರತಿಪಕ್ಷಗಳು ಆಪಾದಿಸುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿಯು ಇದನ್ನು ನಿರಾಕರಿಸುತ್ತಲೇ ಬಂದಿದೆ. ಈಡಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದು ಅರ್ಹತೆಯ ಆಧಾರದಲ್ಲಿ ತನಿಖೆಗಳನ್ನು ನಡೆಸುತ್ತಿದೆ ಹಾಗೂ ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಿಸುವ ಅಧಿಕಾರವನ್ನು ಹೊಂದಿದೆ ಎಂದು ಅದು ಹೇಳಿಕೊಂಡಿದೆ.

2005ರಿಂದ 2014ರವರೆಗಿನ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು 1797 ದೂರುಗಳನ್ನುಅಥವಾ ಪ್ರಕರಣ ಮಾಹಿತಿ ವರದಿ (ಇಸಿಐಆರ್ ಅಥವಾ ಎಫ್ಐಆರ್)ಗಳನ್ನು ದಾಖಲಿಸಿಕೊಂಡಿದ್ದರೆ, ಮಾರ್ಚ್ 2014ರಿಂದ ಮಾರ್ಚ್ 2024ರವರೆಗೆ ಈ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳವಾಗಿತ್ತು ಎಂದು ದತ್ತಾಂಶಗಳು ತಿಳಿಸಿವೆ.

2014ರ ವಿತ್ತ ವರ್ಷದಿಂದ ಹಿಡಿದು ಈವರೆಗೆ 63 ಮಂದಿ ವ್ಯಕ್ತಿಗಳನ್ನು ಕಪ್ಪುಹಣ ಬಿಳುಪು ಕಾಯ್ದೆಯಡಿ ಶಿಕ್ಷಿಸಲಾಗಿದೆಯೆಂದು ಅಧಿಕೃತ ದತ್ತಾಂಶಗಳು ತಿಳಿಸಿವೆ.

2014ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ ಕಪ್ಪುಹಣ ಬಿಳುಪು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು 7264 ಶೋಧಗಳನ್ನು ಅಥವಾ ದಾಳಿಗಳನ್ನು ನಡೆಸಿದೆ. ಇದಕ್ಕಿಂತ ಹಿಂದಿನ 10 ವರ್ಷಗಳ ಅವಧಿಯಲ್ಲಿ ಕೇವಲ 84 ದಾಳಿಗಳಷ್ಟೇ ನಡೆದಿದ್ದರೆ,ಈಗ 86 ಪಟ್ಟುಚ್ಚಳವಾಗಿದೆ.

2014ರಿಂದ 2024ರವರೆಗಿನ ಒಂದು ದಶಕದಲ್ಲಿ ಜಾರಿ ನಿರ್ದೇಶನಾಲಯವು 755 ಮಂದಿಯನ್ನು ಬಂಧಿಸಿದ್ದು,1,21,618 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಇದಕ್ಕೆ ಹೋಲಿಸಿದರೆ ಇದರ ಹಿಂದಿನ ದಶಕದಲ್ಲಿ 29 ಬಂಧನಗಳಾಗಿದ್ದು, 5086.43 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿತ್ತು.

2014ರಿಂದ 2024ರವರೆಗೆ ಒಂದು ದಶಕದಲ್ಲಿ ದೋಷಾರೋಪ ಪಟ್ಟಿಗಳ ಸಲ್ಲಿಕೆಯು ಅದರ ಹಿಂದಿನ ದಶಕಕ್ಕಿಂತ 12 ಪಟ್ಟು ಹೆಚ್ಚಳವನ್ನು ಕಂಡಿದೆ. 1281 ಪ್ರಾಸಿಕ್ಯೂಶನ್ ದೂರುಗಳನ್ನು ನ್ಯಾಯಾಲಯಗಳ ಮುಂದೆ ದಾಖಲಿಸಲಾಗಿತ್ತು ಹಾಗೂ ಅದರ ಹಿಂದಿನ ಅವಧಿಯಲ್ಲಿ 102 ಪ್ರಕರಣಗಳು ದಾಖಲಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News