ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ವಿರುದ್ಧ 32 ಪ್ರಕರಣ ದಾಖಲು
ಜಾವೇದ್ ಹಬೀಬ್ |Photo Credit : X \ @JH_JawedHabib
ಹೊಸದಿಲ್ಲಿ, ಅ. 9: ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಹೂಡಿಕೆದಾರರನ್ನು ವಂಚಿಸಿದ ಆರೋಪದಲ್ಲಿ ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್, ಅವರ ಪುತ್ರ ಅನೋಸ್ ಹಬೀಬ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ 32ಕ್ಕೂ ಅಧಿಕ ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ.
ಜಾವೇದ್ ಹಬೀಬ್ ಅವರ ವಕೀಲ ಪವನ್ ಕುಮಾರ್ ಶನಿವಾರ ಸಂಭಲ್ ಪೊಲೀಸರನ್ನು ಭೇಟಿಯಾಗಿ ಅವರ ಅನಾರೋಗ್ಯವನ್ನು ಉಲ್ಲೇಖಿಸಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದಾರೆ.
ಹಬೀಬ್, ಅವರ ಪುತ್ರ ಹಾಗೂ ಸಹವರ್ತಿ ಫೋಲಿಕ್ಲ್ ಗ್ಲೋಬಲ್ ಕಂಪೆನಿ (ಎಫ್‌ಎಲ್‌ಸಿ) ಅಡಿಯಲ್ಲಿ ಯೋಜನೆ ನಡೆಸಿದ ಹಾಗೂ ಬಿಟ್ ಕಾಯಿನ್ ಖರೀದಿಗಳ ಮೇಲೆ ಶೇ. 50ರಿಂದ 70 ಆದಾಯದ ಭರವಸೆ ನೀಡಿ ಪ್ರತಿ ಹೂಡಿಕೆದಾರರಿಂದ 5ರಿಂದ 7 ಲಕ್ಷ ರೂ. ತೆಗೆದುಕೊಂಡ ಆರೋಪಕ್ಕೆ ಒಳಗಾಗಿದ್ದಾರೆ.
‘‘ಅವರು ಅತ್ಯಧಿಕ ಆದಾಯದ ಭರವಸೆ ನೀಡಿ ಪ್ರತಿ ಹೂಡಿಕೆದಾರರಿಂದ 5ರಿಂದ 7 ಲಕ್ಷ ರೂ. ತೆಗೆದುಕೊಂಡಿದ್ದಾರೆ. ಆದರೆ, ಎರಡೂವರೆ ವರ್ಷಗಳ ಬಳಿಕ ಯಾವುದೇ ಹೂಡಿಕೆದಾರರು ತಮ್ಮ ಹಣ ಸ್ವೀಕರಿಸಿಲ್ಲ’’ ಎಂದು ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ವಿಷ್ಣೋಯಿ ಹೇಳಿದ್ದಾರೆ.
5ರಿಂದ 7 ಕೋ.ರೂ. ವಂಚನೆ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಬೀಬ್ ಹಾಗೂ ಅವರ ಕುಟುಂಬ ದೇಶ ತೊರೆಯದಂತೆ ಈಗಾಗಲೇ ಲುಕೌಟ್ ನೋಟಿಸು ಹೊರಡಿಸಲಾಗಿದೆ.