ಹಬ್ಬಗಳ ಹೆಸರಿನಲ್ಲಿ ಪರಿಸರ ಹಾನಿಗೆ ಸಂವಿಧಾನದ ವಿಧಿ 25 ರಕ್ಷಣೆ ನೀಡುವುದಿಲ್ಲ: ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ
Pc: livelaw
ಹೊಸದಿಲ್ಲಿ: ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಗಂಭೀರ ವಿಚಾರವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಅಂತಹ ಕೃತ್ಯಗಳನ್ನು ಸಮರ್ಥಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಭಯ್ ಓಕಾ ಅಭಿಮತ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಅಭಯ್ ಓಕಾ, ಹಬ್ಬಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ನದಿಗಳು, ಸರೋವರಗಳು, ಸಮುದ್ರಗಳು ಕಲುಷಿತವಾಗುತ್ತಿರುವುದನ್ನು ಉಲ್ಲೇಖಿಸಿದರು. “ವಿಧಿ 25 ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಹಕ್ಕನ್ನು ಒದಗಿಸಿದರೂ, ಅದು ಪರಿಸರ ಹಾನಿಗೆ ಛತ್ರಿಯಾಗುವುದಿಲ್ಲ. ಭಾಗ III ರ ಇತರ ಹಕ್ಕುಗಳಿಗೆ ಒಳಪಟ್ಟಿರುವುದರಿಂದ, ಪರಿಸರ ನಾಶ ಮಾಡುವ ಕೃತ್ಯಗಳಿಗೆ ಸಂವಿಧಾನ ರಕ್ಷಣೆ ನೀಡುವುದಿಲ್ಲ,” ಎಂದು ಹೇಳಿದರು.
ತಂತ್ರಜ್ಞಾನ ಬಳಕೆ ಹೆಚ್ಚಾದರೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಸಮಾಜ ಹಿಂದುಳಿದಿದೆ ಎಂದು ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು. ಹಬ್ಬಗಳ ವೇಳೆ ಧ್ವನಿವರ್ಧಕಗಳ ಅತಿಯಾದ ಬಳಕೆ ಹಾಗೂ ನದಿಗಳಲ್ಲಿ ಅನಿಯಂತ್ರಿತವಾಗಿ ಕಸ ಬಿಸಾಡುವ ಪ್ರವೃತ್ತಿ ಪರಿಸರಕ್ಕೆ ತೀವ್ರ ಹಾನಿ ಮಾಡುತ್ತಿದೆ ಎಂದು ಉಲ್ಲೇಖಿಸಿದರು. “ಮಾಲಿನ್ಯದಿಂದ ತುಂಬಿರುವ ನದಿಗಳನ್ನು ನಾವು ಪವಿತ್ರವೆಂದು ಹೇಗೆ ಹೇಳಬಹುದು?” ಎಂದು ಅವರು ಪ್ರಶ್ನಿಸಿದರು.
ದೇಶದಲ್ಲಿ ಮುಂದುವರಿದಿರುವ ಮೂಢನಂಬಿಕೆಗಳನ್ನು ಉಲ್ಲೇಖಿಸಿದ ಅವರು, ಸುಧಾರಣೆಗಳನ್ನು ಪ್ರಸ್ತಾಪಿಸುವವರು ಧಾರ್ಮಿಕ ಗುಂಪುಗಳ ಟಾರ್ಗೆಟ್ ಆಗುತ್ತಿದ್ದಾರೆ. ಸುಧಾರಣೆಗಳನ್ನು ವಿಧಿ 25ರ ಹಕ್ಕುಗಳ ಆಕ್ಷೇಪಣೆ ಎಂಬಂತೆ ಚಿತ್ರಿಸಲಾಗುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣದಿಂದ ಸುಧಾರಣೆಯತ್ತ ರಾಜಕೀಯ ಕ್ಷೇತ್ರವು ಗಮನ ಹರಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಧಿ 51A ಅಡಿಯಲ್ಲಿ ರಾಜ್ಯದ ಕರ್ತವ್ಯಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಓಕಾ, 2027ರ ಕುಂಭಮೇಳಕ್ಕಾಗಿ ನಾಸಿಕ್ ನಲ್ಲಿ ನೂರು ವರ್ಷಗಳಷ್ಟು ಹಳೆಯ ಮರಗಳನ್ನು ಕಡಿಯುವ ಪ್ರಸ್ತಾಪವೇ ರಾಜ್ಯ ಸರಕಾರದ ವೈಫಲ್ಯಕ್ಕೆ ಉದಾಹರಣೆ. ನಾಗರಿಕರ ಜೊತೆಗೆ ರಾಜ್ಯವೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಫಲವಾಗಿದೆ,” ಎಂದು ಓಕಾ ಅಭಿಪ್ರಾಯಪಟ್ಟರು.
“ವೈಜ್ಞಾನಿಕ ಮನೋಭಾವ ಮತ್ತು ಸುಧಾರಣಾತ್ಮಕ ಚಿಂತನೆಯನ್ನು ನಾವು ನಿಜವಾಗಿಯೂ ಅಳವಡಿಸಿಕೊಂಡಿದ್ದರೆ, ಹಬ್ಬಗಳಲ್ಲಿ ಪ್ರಾಣಿಬಲಿ, ಧ್ವನಿವರ್ಧಕಗಳ ಹಾವಳಿ ಮತ್ತು ಪರಿಸರ ಹಾನಿ ಮಾಡುವ ಆಚರಣೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ” ಎಂದು ನಿವೃತ್ತ ನ್ಯಾಯಮೂರ್ತಿ ಓಕಾ ವಿಷಾದ ವ್ಯಕ್ತಪಡಿಸಿದರು.