×
Ad

ಹಿಜಾಬ್ ವಿವಾದ: ಎರಡು ದಿನಗಳ ಕಾಲ ರಜೆ ಘೋಷಿಸಿದ ಕೇರಳದ ಕ್ಯಾಥೋಲಿಕ್ ಶಾಲೆ

ರಕ್ಷಣೆ ನೀಡುವಂತೆ ಹೈಕೋರ್ಟ್‌ನಿಂದ ಪೊಲೀಸರಿಗೆ ಸೂಚನೆ

Update: 2025-10-14 13:45 IST

Photo credit: stritaspublicschool.edu.in

ಕೊಚ್ಚಿ: ಹಿಜಾಬ್ ಧರಿಸಲು ವಿದ್ಯಾರ್ಥಿನಿಯೊಬ್ಬರು ಅನುಮತಿ ಕೇಳಿದ ಹಿನ್ನೆಲೆಯಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಎರ್ನಾಕುಲಂ ಜಿಲ್ಲೆಯ ಪಲ್ಲೂರುತಿಯ ಸೇಂಟ್ ರೀಟಾ ಪಬ್ಲಿಕ್ ಶಾಲೆಡೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಆಡಳಿತದಲ್ಲಿ ನಡೆಸುವ ಈ ಸಿಬಿಎಸ್‌ಇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯು ಪರಿಸ್ಥಿತಿಯನ್ನು ಶಾಂತಗೊಳಿಸಲು ಪೋಷಕರು–ಶಿಕ್ಷಕರ ಸಂಘ(ಪಿಟಿಎ)ದ ಶಿಫಾರಸ್ಸಿನ ಮೇರೆಗೆ ಅಕ್ಟೋಬರ್ 13 ಮತ್ತು 14 ರಂದು ರಜೆ ಘೋಷಿಸಲಾಗಿದೆ.

“ಪ್ರಸಕ್ತ ಪರಿಸ್ಥಿತಿಯಿಂದ ಉಂಟಾದ ಮಾನಸಿಕ ಒತ್ತಡದಿಂದ ಶಿಕ್ಷಕರು ಮತ್ತು ಸಿಬ್ಬಂದಿ ರಜೆ ತೆಗೆದುಕೊಂಡಿರುವುದರಿಂದ ಶಾಲೆಗೆ ರಜೆ ನೀಡಲಾಗುತ್ತಿದೆ,” ಎಂದು ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹೆಲೀನಾ ಆಲ್ಬಿ ಅವರು ಪೋಷಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರವು ವಿವಾದದ ಸ್ವರೂಪವನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಶಾಲೆಯಿಂದ ಅನುಮತಿಸಲಾಗದ ಉಡುಪಿನಲ್ಲಿ ಬಂದ ವಿದ್ಯಾರ್ಥಿನಿ ಎಂದು ಉಲ್ಲೇಖಿಸಿದೆ.

ಈ ಬಗ್ಗೆ ಪೋಷಕರ ಸಹಕಾರಕ್ಕಾಗಿ ವಿನಂತಿಸಿದ ಅವರು ಸಂಸ್ಥೆಯ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಮೂಲಗಳ ಪ್ರಕಾರ, ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿದ ಬಳಿಕ ವಿವಾದ ತೀವ್ರಗೊಂಡಿದೆ. ಶಾಲೆಯು ತನ್ನ ಸಮವಸ್ತ್ರ ನೀತಿಯಲ್ಲಿ ಯಾವುದೇ ಧಾರ್ಮಿಕ ಉಡುಪು ಅಥವಾ ಚಿಹ್ನೆಗಳನ್ನು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಿಸ್ಟರ್ ಹೆಲೀನಾ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ವಿದ್ಯಾರ್ಥಿನಿಯ ತಂದೆ ಹಾಗೂ ಇನ್ನೂ ಆರು ಮಂದಿ ಅಕ್ಟೋಬರ್ 10ರಂದು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪಲ್ಲೂರುತಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. “ಅವರ ನಡೆ ಪ್ರಚೋದನಕಾರಿ ಮತ್ತು ಅಪಾಯಕಾರಿ ಸ್ವರೂಪದ್ದಾಗಿತ್ತು,” ಎಂದು ಅವರು ಆರೋಪಿಸಿದ್ದಾರೆ.

ಹೈಕೋರ್ಟ್‌ನಿಂದ ಶಾಲೆಗೆ ಪೊಲೀಸ್ ರಕ್ಷಣೆ:

ವಿವಾದದ ನಂತರ ಶಾಲೆಯ ಆಡಳಿತ ಮಂಡಳಿಯು ಹೈಕೋರ್ಟ್‌ಗೆ ಮೊರೆ ಹೋಗಿದ್ದು, ನ್ಯಾಯಮೂರ್ತಿ ಎನ್. ನಾಗರೇಶ್ ಅವರಿದ್ದ ಪೀಠ ನಡೆಸಿದ ತುರ್ತು ವಿಚಾರಣೆಯಲ್ಲಿ ಸೇಂಟ್ ರೀಟಾ ಪಬ್ಲಿಕ್ ಶಾಲೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಶಾಲೆಯ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ, 1998ರಲ್ಲಿ ಸ್ಥಾಪಿತವಾದ ಸಂಸ್ಥೆ ಜಾತ್ಯತೀತ ಧೋರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶದ ವೇಳೆ ಪ್ರತಿಯೊಬ್ಬ ವಿದ್ಯಾರ್ಥಿ ಸಮವಸ್ತ್ರ ನಿಯಮ ಪಾಲನೆಗೆ ಲಿಖಿತ ಒಪ್ಪಿಗೆ ನೀಡುತ್ತಾರೆ ಎಂದು ವಿವರಿಸಲಾಗಿದೆ.

ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ಹಿಜಾಬ್ ಧರಿಸಲು ಪ್ರಾರಂಭಿಸಿದ ಬಳಿಕ, ಶಾಲೆಯು ಅದನ್ನು ತನ್ನ ಡೈರಿಯಲ್ಲಿರುವ 30ರಿಂದ 33ನೇ ವಿಧಿಯ ಪ್ರಕಾರ ಸಮವಸ್ತ್ರ ನೀತಿ ಉಲ್ಲಂಘನೆ ಎಂದು ಪರಿಗಣಿಸಿದೆ.

ಈ ಕುರಿತು ವಿದ್ಯಾರ್ಥಿಯ ಪೋಷಕರು ವಿದ್ಯಾರ್ಥಿನಿಯ ಪೋಷಕರಿಂದ ಶಾಲೆಯು ವಿವರಣೆ ಕೇಳಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಅ.10 ರಂದು ಆರು ಮಂದಿಯ ಜೊತೆಯಲ್ಲಿ ಶಾಲಾ ಆವರಣಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತೊಂದು ಗುಂಪು ಶಾಲೆಯ ಹೊರಗೆ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದೆ ಎಂದು ಶಾಲೆಯು ಆರೋಪಿಸಿದೆ.

“ಪ್ರಿ-ಕೆಜಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದ ಸಮಯದಲ್ಲೇ ಈ ಘಟನೆಯು ನಡೆದಿದೆ. ಇದರಿಂದ ಚಿಕ್ಕ ಮಕ್ಕಳಲ್ಲಿ ಭಯ ಮತ್ತು ಭಾವನಾತ್ಮಕ ಅಶಾಂತಿ ಉಂಟಾಯಿತು. ಮಕ್ಕಳು ಅಳಲು ಪ್ರಾರಂಭಿಸಿದರು” ಎಂದು ಶಾಲೆಯ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯ ಪೋಷಕರು ಇತರ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರನ್ನು ಸಂಪರ್ಕಿಸಿ ಪ್ರತಿಭಟನೆ ನಡೆಸಲು ಒಟ್ಟಾಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಶಾಲೆಯು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಶಾಲೆಗೆ ಅಕ್ಟೋಬರ್ 13, 14 ರಂದು ರಜೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಶಾಲೆಯು ಪೊಲೀಸರಿಗೆ ದೂರು ನೀಡಿದರೂ ಯಾವುದೇ ತುರ್ತು ರಕ್ಷಣೆ ದೊರೆಯಲಿಲ್ಲ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ನ್ಯಾಯಾಲಯವು ತುರ್ತು ಆದೇಶ ಹೊರಡಿಸಿ ಶಾಲೆಗೆ ಪೊಲೀಸ್ ರಕ್ಷಣೆ ಒದಗಿಸಲು ನಿರ್ದೇಶಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 10ಕ್ಕೆ ನಿಗದಿಪಡಿಸಿದೆ.

ಸೇಂಟ್ ರೀಟಾ ಪಬ್ಲಿಕ್ ಶಾಲೆಯ ಪರವಾಗಿ ವಕೀಲರಾದ ಬಿಮಲಾ ಬೇಬಿ, ಮಗಿ ಪವಿತ್ರನ್, ರೋಶನ್ ಶಾಜಿ, ರೆಮ್ಯಾ ಥಾಮಸ್ ಮತ್ತು ಜಾಸ್ಮಿನ್ ಲಿಗಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News