ಕೊಚ್ಚಿ: ಐಷಾರಾಮಿ ಬಡಾವಣೆ ಬೀದಿಯಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ

Update: 2024-05-04 15:01 GMT

ಸಾಂದರ್ಭಿಕ ಚಿತ್ರ

ಕೊಚ್ಚಿ: ಕೊಚ್ಚಿಯ ಐಷಾರಾಮಿ ವಸತಿ ಪ್ರದೇಶದ ಬೀದಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿದ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಕುರಿತು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಶುಕ್ರವಾರ ಪ್ರಕರಣ ದಾಖಲಿಸಿದೆ.

ಘಟನೆ ನಡೆದ ಪನಂಪಲ್ಲಿ ಪಟ್ಟಣ ಪ್ರದೇಶಕ್ಕೆ ಭೇಟಿ ನೀಡಿದ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ ವಿ ಮನೋಜ್ ಕುಮಾರ್ ಅವರು ಘಟನೆಯ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಆಯೋಗ, ಯಾರಾದರೂ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರನ್ನು ತ್ಯಜಿಸುವುದು ಅಥವಾ ಕೊಲ್ಲುವುದು ಎಂದಿಗೂ ಆಯ್ಕೆಯಾಗಿರಬಾರದು ಎಂದು ಹೇಳಿದೆ.

ʼಅಮ್ಮತೊಟ್ಟಿಲ್ʼ ಅಥವಾ ಮಕ್ಕಳ ಮನೆಗಳಂತಹ ಯೋಜನೆ ಅಡಿಯಲ್ಲಿ ಮಕ್ಕಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸರ್ಕಾರಿ ವ್ಯವಸ್ಥೆಗಳಿವೆ. ಈ ಸಂಸ್ಥೆಗಳು ಮಕ್ಕಳು ಸುರಕ್ಷಿತವಾಗಿ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಸುರಕ್ಷಿತ ವಾತಾವರಣವನ್ನು ಒದಗಿಸುತ್ತವೆ ಎಂದು ಕುಮಾರ್ ಹೇಳಿದರು.

ಅಮ್ಮತೊಟ್ಟಿಲ್ ಎಂಬುದು ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ ಅಡಿಯಲ್ಲಿನ ಯೋಜನೆಯಾಗಿದ್ದು, ಇದು ನಿರ್ಗತಿಕ ಮತ್ತು ಪರಿತ್ಯಕ್ತ ಮಕ್ಕಳಿಗೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕೊಚ್ಚಿ ಕಾರ್ಪೊರೇಶನ್‌ನ ಕನ್ಸರ್ವೆನ್ಸಿ ಕಾರ್ಯಕರ್ತರು ಪನಂಪಲ್ಲಿ ಪಟ್ಟಣದ ಬೀದಿಯಲ್ಲಿ ಮಗುವಿನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು, ಮಗುವನ್ನು ಸುತ್ತಿ ಎಸೆದಿದ್ದ ಅಮೆಝಾನ್ ಡೆಲಿವರಿ ಪ್ಯಾಕೆಟ್‌ನಲ್ಲಿರುವ ವಿಳಾಸವನ್ನು ಬಳಸಿಕೊಂಡು 23 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದಿದ್ದರು.

ವಶಕ್ಕೆ ಪಡೆದಿರುವ ಮಹಿಳೆ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯಾಗಿದ್ದು, ಆಕೆ ತನ್ನ ಅಪಾರ್ಟ್‌ಮೆಂಟ್ ಬಾತ್‌ರೂಮ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ತನ್ನ ಫ್ಲಾಟ್ ಸಂಕೀರ್ಣದ ಮುಂಭಾಗದ ಬೀದಿಯಲ್ಲಿ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News