×
Ad

ಮಧ್ಯ ಪ್ರದೇಶ: ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕನ ಪುತ್ರ

Update: 2023-08-04 21:34 IST

Photo: ANI 

ಸಿಂಗ್ರೌಲಿ: ಮಧ್ಯಪ್ರದೇಶದ ಸಿಂಗ್ರೌಲಿಯ ಬಿಜೆಪಿ ಶಾಸಕ ರಾಮಲಲ್ಲು ವೈಶ್ ಅವರ ಪುತ್ರ ವಿವೇಕ ವೈಶ್ ಗುರುವಾರ ಸಂಜೆ ಆದಿವಾಸಿ ಯುವಕನೋರ್ವನ ಮೇಲೆ ಗುಂಡು ಹಾರಿಸಿದ್ದಾನೆ.

ಗಾಯಾಳು ಸೂರ್ಯಪ್ರಕಾಶ ಖೈರಬಾರ್ ಮೊರ್ಬಾ ನಿವಾಸಿಯಾಗಿದ್ದು, ವೈಶ್ ಜೊತೆ ಮಾತಿನ ಚಕಮಕಿ ನಡೆಸಿದ್ದ. ಈ ವೇಳೆ ವೈಶ್ ಏಕಾಏಕಿ ತನ್ನ ರಿವಾಲ್ವರ್‌ನಿಂದ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿಯ ವಿರುದ್ಧ ಐಪಿಸಿಯ ಕಲಂ 307 (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು,ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಶ್ ಗೂಂಡಾಗಿರಿ ನಡೆಸಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ವೈಶ್ ಅಕ್ರಮ ಕಲ್ಲಿದ್ದಲು ಪೂರೈಕೆ ಮತ್ತು ಮರಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದಾನೆ. ಇದಕ್ಕಾಗಿ ತನ್ನ ತಂದೆಯ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾನೆ,ಜೊತೆಗೆ ಸಿಂಗ್ರೌಲಿಯ ಕೆಲವು ಪ್ರಬಲ ವ್ಯಕ್ತಿಗಳೂ ಆತನಿಗೆ ನೆರವಾಗುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸ್ಥಳದಲ್ಲಿ ಹಲವಾರು ಜನರಿದ್ದರಿಂದ ಗುಂಡು ಹಾರಾಟ ಘಟನೆ ಬೆಳಕಿಗೆ ಬಂದಿದೆ. ವೈಶ್ ಆಗಾಗ್ಗೆ ಆದಿವಾಸಿಗಳಲ್ಲಿ ಭೀತಿಯನ್ನು ಹುಟ್ಟಿಸುತ್ತಾನೆ,ತನಗೆ ಮನಸ್ಸು ಬಂದಾಗಲೆಲ್ಲ ಅವರನ್ನು ಥಳಿಸುತ್ತಾನೆ. ಆತನನ್ನು ಯಾರೂ ತಡೆಯುತ್ತಿಲ್ಲ. ಪೊಲೀಸರು ಬಂಧಿಸಿದರೂ ಆತನ ತಂದೆ ತನ್ನ ಪ್ರಭಾವವನ್ನು ಬಳಸಿ ಬಿಡುಗಡೆ ಮಾಡಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದಲೂ ಇದು ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹೇಳಿದರು.

ಘಟನೆಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ ಅವರು,ರಾಜ್ಯದಲ್ಲಿ ಆದಿವಾಸಿಗಳ ಮೇಲೆ ನಿಯಮಿತವಾಗಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ನಾಯಕರು ಆದಿವಾಸಿ ಸಮುದಾಯಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News