ಪ್ರಧಾನಿ ಮೋದಿ, ಬಿಜೆಪಿ ನಾಯಕರನ್ನು ಅಣಕಿಸುವ ‘ವಸೂಲಿ ಟೈಟನ್ಸ್’ ಪೋಸ್ಟರ್: ಕ್ಷಮೆಯಾಚಿಸಿದ ಮಹಿಳಾ ಕ್ರಿಕೆಟರ್‌

Update: 2024-03-29 15:31 GMT

Photo: X 

 

ಹೊಸದಿಲ್ಲಿ: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಹಾಗೂ ಇನ್ನಿತರ ಬಿಜೆಪಿ ನಾಯಕರನ್ನು ಅಣಕಿಸುವ ‘ವಸೂಲಿ ಟೈಟನ್ಸ್’ ಪೋಸ್ಟರ್ ಅನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಪೂಜಾ ವಸ್ತ್ರಕರ್ ಹಂಚಿಕೊಂಡಿದ್ದಾರೆ. ಆದರೆ, ಈ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೆ ಅವರು ಅದನ್ನು ಅಳಿಸಿ ಹಾಕಿ ಕ್ಷಮೆಯಾಚಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಯನ್ನು ತಪ್ಪಿಸಲು ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಯು ಸುಲಿಗೆ ಮಾಡುವುದರಲ್ಲಿ ಭಾಗಿಯಾಗಿದೆ ಎಂದು ನಿನ್ನೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ಈ ಪೋಸ್ಟ್ ಪ್ರಕಟವಾಗಿದೆ.

 

 

 

 

 

ಈ ಸ್ಕ್ರೀನ್ ಶಾಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ನೆಟ್ಟಿಗರು, ಈ ಪೋಸ್ಟ್ ಕಾಂಗ್ರೆಸ್ ಗೆ ಬೆಂಬಲ ಸೂಚಿಸುವಂತಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದರೆ, ಮತ್ತೆ ಕೆಲವು ಬಳಕೆದಾರರು, ಇಂತಹ ವಿಷಯವನ್ನು ಹಂಚಿಕೊಂಡಿರುವುದರಿಂದ ನಿಮ್ಮ ವೃತ್ತಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಆದರೆ, ಈ ವಿವಾದಾತ್ಮಕ ಪೋಸ್ಟ್ ಪ್ರಕಟವಾದ ಕೆಲ ಗಂಟೆಗಳ ನಂತರ ಕ್ಷಮೆ ಯಾಚಿಸಿರುವ ಪೂಜಾ, ಆ ಪೋಸ್ಟ್ ಅನ್ನು ಹಂಚಿಕೊಂಡಾಗ, ಫೋನ್ ನನ್ನ ಕೈಯಲ್ಲಿರಲಿಲ್ಲ ಹಾಗೂ ಬೇರೆ ಯಾರೋ ಆ ಕೆಲಸವನ್ನು ಮಾಡಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ಕ್ರಿಕೆಟರ್‌ ಆಗಿರುವ ಪೂಜಾ ವಸ್ತ್ರಕರ್, ಸದ್ಯ ಮಧ್ಯಪ್ರದೇಶ ಹಾಗೂ ಭಾರತ ತಂಡದ ಪರವಾಗಿ ಆಡುತ್ತಿದ್ದಾರೆ. ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಬಲಗೈ ಬ್ಯಾಟರ್ ಆಗಿರುವ ಪೂಜಾ ವಸ್ತ್ರಕರ್, ಆಲ್ ರೌಂಡರ್ ಆಗಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡುವ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News