ನಿಫ್ಟಿ V/S ಚಿನ್ನ: ಹೆಚ್ಚಿನ ಪ್ರತಿಫಲ ಯಾವುದರಲ್ಲಿ?
ಮುಂಬೈ: ಗಗನಮುಖಿಯಾಗಿ ಸಾಗಿರುವ ಚಿನ್ನ ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ವಾರ್ಷಿಕ ಶೇಕಡ 18ರಷ್ಟು ಪ್ರತಿಫಲವನ್ನು ನೀಡಿದ್ದರೆ, ನಿಫ್ಟಿ ವಾರ್ಷಿಕ ಶೇಕಡ 15ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಆದರೆ ಮುಂಚೂಣಿ ಈಕ್ವಿಟಿ ಸೂಚ್ಯಂಕಗಳು ಚಿನ್ನವನ್ನು ಕೂಡಾ ಮೀರಿಸಿವೆ. ಒಂದು, ಮೂರು, 10 ಹಾಗೂ 15 ವರ್ಷಗಳ ಲೆಕ್ಕಾಚಾರದಲ್ಲಿ ನಿಫ್ಟಿ ಮುಂದಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಏಳು ವರ್ಷಗಳ ಮಾನದಂಡವನ್ನು ತೆಗೆದುಕೊಂಡರೆ ಪ್ರತಿಫಲ ಸಮಾನವಾಗಿದೆ. ನಿಫ್ಟಿಯ ಸಂಯುಕ್ತ ವಾರ್ಷಿಕ ಪ್ರಗತಿ ದರ (ಸಿಎಜಿಆರ್) ಶೇಕಡ 15ರಷ್ಟಿದ್ದರೆ, ಚಿನ್ನದ ಪ್ರಗತಿದರ ಶೇಕಡ 14ರಷ್ಟಿದೆ ಎಂದು ಎಂಬಿಟ್ ಗ್ಲೋಬಲ್ ಪ್ರೈವೇಟ್ ಕ್ಲೈಂಟ್ ಸಿಇಓ ಅಮೃತಾ ಫರ್ಮಹಾನ್ ವರದಿಯಲ್ಲಿ ವಿವರಿಸಿದ್ದಾರೆ.
ಈ ವರ್ಷದಲ್ಲಿ ಇದುವರೆಗೆ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಶೇಕಡ 20ರಷ್ಟು ಹೆಚ್ಚಳ ಕಂಡಿದ್ದು, ಪ್ರತಿ ಔನ್ಸ್ ದರ 2390 ಡಾಲರ್ ಇದೆ. ಏಪ್ರಿಲ್ ಮಧ್ಯಭಾಗದಲ್ಲಿ ಚಿನ್ನದ ದರ ಸರ್ವಕಾಲಿಕ ದಾಖಲೆ ಎನಿಸಿದ 2400 ಡಾಲರ್ ಮಟ್ಟವನ್ನು ಕೂಡಾ ಮೀರಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಕೂಡಾ ಏಪ್ರಿಲ್ ಆರಂಭದಲ್ಲಿ 10 ಗ್ರಾಂ ಚಿನ್ನದ ಬೆಲೆ 70 ಸಾವಿರದ ಗಡಿಯನ್ನು ಕೂಡಾ ದಾಟಿತ್ತು ಹಾಗೂ ಎಂಸಿಎಕ್ಸ್ ನಲ್ಲಿ 75,000ದ ಮಾನದಂಡವನ್ನು ಕೂಡಾ ಮುರಿಯುವ ಹಂತಕ್ಕೆ ಬಂದಿತ್ತು. ಆದರೆ ಅಂತಿಮವಾಗಿ 73 ಸಾವಿರದ ಆಸುಪಾಸಿನಲ್ಲಿ ನಿಂತಿದೆ. ಚೀನಾ, ಭಾರತ ಹಾಗೂ ರಷ್ಯಾ ಸೇರಿದಂತೆ ಹಲವು ಕೇಂದ್ರೀಯ ಬ್ಯಾಂಕ್ ಗಳು ಚಿನ್ನದ ಖರೀದಿಗೆ ಮುಂದಾಗಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಫರ್ಮಹಾನ್ ಹೇಳುತ್ತಾರೆ.