ಗೋವಾ ನೈಟ್‍ಕ್ಲಬ್ ದುರಂತದ ಬೆನ್ನಲ್ಲೇ ಮಾಲಕರು ದೇಶದಿಂದ ಪಲಾಯನ
Photo| NDTV
ಹೊಸದಿಲ್ಲಿ: ಗೋವಾದಲ್ಲಿ ಶನಿವಾರ ರಾತ್ರಿ 25 ಮಂದಿಯ ಸಜೀವ ದಹನಕ್ಕೆ ಕಾರಣವಾದ ಬೆಂಕಿ ಆಕಸ್ಮಿಕ ಸಂಭವಿಸಿದ ನೈಟ್ ಕ್ಲಬ್‍ನ ಇಬ್ಬರು ಮಾಲಕರು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತದಿಂದ ಥಾಯ್ಲೆಂಡ್‍ಗೆ ಪಲಾಯನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದುವರೆಗೂ ಪೊಲೀಸರು ಅವರ ಹುಡುಕಾಟದಲ್ಲಿದ್ದರು.
ಇಬ್ಬರು ಮಾಲಕರು ಸೇರಿದಂತೆ ನಾಲ್ಕು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾದ ಬೆನ್ನಲ್ಲೇ, ಗೌರವ್ ಮತ್ತು ಸೌರಭ್ ಲೂತ್ರಾ ಅವರನ್ನು ಹುಡುಕಿಕೊಂಡು ಪೊಲೀಸ್ ತಂಡ ದೆಹಲಿಗೆ ತೆರಳಿತ್ತು. ಆದಾಗ್ಯೂ ಅವರಿಬ್ಬರು ಮನೆಯಲ್ಲಿ ಇಲ್ಲದ ಕಾರಣ ಅವರ ಮನೆಗೆ ನೋಟಿಸ್ ಹಚ್ಚಿ ಪೊಲೀಸ್ ತಂಡ ವಾಪಸ್ಸಾಗಿದೆ.
ಇಬ್ಬರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸುವಂತೆ ಗೋವಾ ಪೊಲೀಸರು ಬ್ಯೂರೊ ಆಫ್ ಇಮಿಗ್ರೇಶನ್‍ಗೆ ಮನವಿ ಮಾಡಿಕೊಂಡಿದ್ದರು. ಲುಕೌಟ್ ನೋಟಿಸ್ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಯೊಂದು ದೇಶದ ವಿಮಾನ ನಿಲ್ದಾಣಗಳ ಹಾಗೂ ಬಂದರುಗಳ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಲ್ಲಿ ನಿಗಾ ಇಡುವಂತೆ ಸೂಚಿಸುತ್ತಾರೆ.
ಮುಂಬೈನಲ್ಲಿರುವ ಬ್ಯೂರೋ ಆಫ್ ಇಮಿಗ್ರೇಶನ್ ಮಾಹಿತಿಯ ಪ್ರಕಾರ, ಭಾನುವಾರ ಮುಂಜಾನೆ 5.30ಕ್ಕೆ ಇಬ್ಬರೂ ಥಾಯ್ಲೆಂಡ್‍ನ ಫುಕೆಟ್‍ಗೆ ಪಲಾಯನ ಮಾಡಿದ್ದಾರೆ. ಅಂದರೆ ಭೀಕರ ದುರಂತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಇಬ್ಬರೂ ದೇಶ ತೊರೆದಿದ್ದಾರೆ. ಉತ್ತರ ಗೋವಾದ ರೋಮಿಯೊ ಲೇನ್‍ನ ಬ್ರಿಚ್ ನೈಟ್‍ಕ್ಲಬ್‍ನಲ್ಲಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಇಬ್ಬರು ಸಹೋದರರು ದೆಹಲಿಯಲ್ಲಿದ್ದರು. ಬಳಿಕ ಇಂಡಿಗೊ ವಿಮಾನ (6ಇ-1073) ದ ಮೂಲಕ ಥಾಯ್ಲೆಂಡ್‍ಗೆ ಪಲಾಯನ ಮಾಡಿದ್ದಾರೆ. ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ದೇಶದಿಂದ ಪಲಾಯನ ಮಾಡಿರುವುದು ಸ್ಪಷ್ಟ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಸಾಧ್ಯವಾದಷ್ಟು ಬೇಗ ಬಂಧಿಸುವ ನಿಟ್ಟಿನಲ್ಲಿ ಗೋವಾ ಪೊಲೀಸರು ಸಿಬಿಐನ ಇಂಟರ್‍ಪೋಲ್ ವಿಭಾಗದ ನೆರವು ಕೋರಿದ್ದಾರೆ.