×
Ad

ಆನ್‌ಲೈನ್ ಗೇಮಿಂಗ್ ನಿಷೇಧ ಪ್ರಶ್ನಿಸುವ ಅರ್ಜಿ : ಕೇಂದ್ರ ಸರಕಾರದಿಂದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್‌

Update: 2025-11-04 20:57 IST

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ, ನ. 4: ಹಣವಿಟ್ಟು ಆಡುವ ಆನ್‌ಲೈನ್ ಗೇಮ್ಸ್‌ಗಳನ್ನು ನಿಷೇಧಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಮಗ್ರ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಅರ್ಜಿಗಳಲ್ಲಿ ಕೋರಲಾಗಿರುವ ಮಧ್ಯಂತರ ಪರಿಹಾರದ ಬಗ್ಗೆ ಕೇಂದ್ರ ಸರಕಾರವು ತನ್ನ ಉತ್ತರವನ್ನು ಸಲ್ಲಿಸಿದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಲಾಯಿತು.

‘‘ಕೇಂದ್ರ ಸರಕಾರದ ಪರವಾಗಿ ಹಾಜರಾಗಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್, ಮುಖ್ಯ ಅರ್ಜಿಗೆ ಸಮಗ್ರ ಉತ್ತರವನ್ನು ನೀಡಬೇಕೆಂದು ನಾವು ಬಯಸುತ್ತೇವೆ’’ ಎಂದು ನ್ಯಾಯಪೀಠ ಹೇಳಿತು.

ಉತ್ತರದ ಪ್ರತಿಗಳನ್ನು ಅರ್ಜಿದಾರರ ಪರವಾಗಿ ಹಾಜರಾಗಿರುವ ವಕೀಲರಿಗೆ ಮುಂಚಿತವಾಗಿ ನೀಡಬೇಕು ಎಂದು ಹೇಳಿದ ನ್ಯಾಯಾಲಯ, ಅವರು ಅದಕ್ಕೆ ಪ್ರತಿಕ್ರಿಯೆ ನೀಡಲು ಬಯಸಿದರೆ ಸಾಧ್ಯವಾದಷ್ಟು ಬೇಗ ನೀಡಬೇಕು ಎಂದು ನ್ಯಾಯಾಲಯ ಹೇಳಿತು.

ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 26ಕ್ಕೆ ಮುಂದೂಡಿತು.

ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ, 2025ನ್ನು ಆಗಸ್ಟ್ 20ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಸಂಸತ್‌ನ ಉಭಯ ಸದನಗಳು ಅದನ್ನು ಧ್ವನಿ ಮತದಿಂದ ಅಂಗೀಕರಿಸಿದವು ಮತ್ತು ಆಗಸ್ಟ್ 22ರಂದು ರಾಷ್ಟ್ರಪತಿ ಅದಕ್ಕೆ ಅಂಕಿತವನ್ನು ಹಾಕಿದರು.

ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ಇ-ಸ್ಪೋರ್ಟ್ಸ್ ಸೇರಿದಂತೆ ಹಣವಿಟ್ಟು ಆಡುವ ಆನ್‌ಲೈನ್ ಗೇಮ್‌ಗಳನ್ನು ಈ ಕಾನೂನು ನಿಷೇಧಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News