ಕೋವಿನ್ ಪ್ರಮಾಣಪತ್ರಗಳಿಂದ ಪ್ರಧಾನಿ ಮೋದಿ ಫೊಟೋ ಮಾಯ!

Update: 2024-05-02 14:09 GMT

Photo: thehindu.com

ಹೊಸದಿಲ್ಲಿ: ಕೋವಿಡ್ ಲಸಿಕೆ ಪಡೆದವರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿತರಿಸುವ ಕೋವಿನ್ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವು ಮಾಯವಾಗಿದೆ.

ಕೋವಿನ್ ಪ್ರಮಾಣಪತ್ರಗಳು ಮೋದಿಯವರ ಚಿತ್ರದೊಂದಿಗೆ ‘ಭಾರತವು ಒಂದಾಗಿ ಕೋವಿಡ್-19ನ್ನು ಸೋಲಿಸಲಿದೆ ’ಎಂಬ ಘೋಷವಾಕ್ಯವನ್ನು ಹೊಂದಿದ್ದು, ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಈಗ ಘೋಷವಾಕ್ಯ ಮಾತ್ರ ಇದೆ, ಪ್ರಧಾನಿಯವರ ಹೆಸರು ಮತ್ತು ಚಿತ್ರವನ್ನು ತೆಗೆಯಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಬುಧವಾರ ಈ ವಿದ್ಯಮಾನವನ್ನು ಬೆಟ್ಟು ಮಾಡಿದ್ದರು. ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗ ಎಲ್ಲ ಸರಕಾರಿ ವೆಬ್ಸೈಟ್ ಗಳಿಂದ ಮೋದಿಯವರ ಚಿತ್ರಗಳನ್ನು ತೆಗೆಯಲಾಗಿತ್ತು.

ಈ ಹಿಂದೆ ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿಯೂ ನಿರ್ದಿಷ್ಟ ರಾಜ್ಯಗಳಲ್ಲಿ ವಿತರಿಸಲಾದ ಕೋವಿನ್ ಪ್ರಮಾಣಪತ್ರಗಳಿಂದ ಮೋದಿಯವರ ಚಿತ್ರಗಳು ಮಾಯವಾಗಿದ್ದವು.

ಆ್ಯಸ್ಟ್ರಾಝೆನಿಕಾದ ಪರವಾನಿಗೆಯಡಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ್ದ ಕೋವಿಡ್ ಲಸಿಕೆ ‘ಕೋವಿಶೀಲ್ಡ್’ ಅಡ್ಡ ಪರಿಣಾಮಗಳ ಬಗ್ಗೆ ಮೂಲ ಕಂಪನಿಯು ಇತ್ತೀಚಿಗೆ ಒಪ್ಪಿಕೊಂಡಿದ್ದು, ಕೋವಿಡ್ ಪ್ರಮಾಣ ಪತ್ರಗಳಿಂದ ಮೋದಿಯವರ ಚಿತ್ರವನ್ನು ತೆಗೆಯಲು ಇದು ಕಾರಣವಾಗಿರಬಹುದು ಎಂದು ಹಲವಾರು ಬಳಕೆದಾರರು ಊಹಾಪೋಹಗಳನ್ನು ವ್ಯಕ್ತಪಡಿಸಿದ್ದರು.

ಆದರೆ ಲೋಕಸಭಾ ಚುನಾವಣೆಗಳಿಗಾಗಿ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕೋವಿನ್ ಪ್ರಮಾಣಪತ್ರಗಳಿಂದ ಮೋದಿಯವರ ಚಿತ್ರವನ್ನು ತೆಗೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News