×
Ad

ನೆಹರೂ ಈಗಲೂ ವಿಶ್ವದಾದ್ಯಂತ ನಾಯಕರಿಗೆ ಸ್ಫೂರ್ತಿ, ಆದರೆ ಬಿಜೆಪಿ ನಿಂದಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಮಮ್ದಾನಿಯವರ ವಿಜಯೋತ್ಸವದ ಭಾಷಣ ಉಲ್ಲೇಖ

Update: 2025-11-05 22:29 IST

ಪ್ರಿಯಾಂಕಾ ಗಾಂಧಿ | Photo Credit : PTI

ಪಾಟ್ನಾ,ನ.5: ಬಿಜೆಪಿ ನೇತೃತ್ವದ ಎನ್ಡಿಎ ಮಾಡುತ್ತಿರುವ ‘ವಂಶಪಾರಂಪರ್ಯ ರಾಜಕೀಯ’ ಆರೋಪಕ್ಕೆ ಬುಧವಾರ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ತನ್ನ ಕುಟುಂಬದ ಪರಂಪರೆಯನ್ನು ಪ್ರಶ್ನಿಸುವವರಿಗೆ ದೇಶಕ್ಕಾಗಿ ಮಾಡಿದ ತ್ಯಾಗಗಳು ಅರ್ಥವಾಗುವುದಿಲ್ಲ ಎಂದು ಹೇಳಿದರು.

ತನ್ನ ವಿಜಯೋತ್ಸವ ಭಾಷಣದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರನ್ನು ಉಲ್ಲೇಖಿಸಿದ್ದ ನ್ಯೂಯಾರ್ಕ್ ನ ನೂತನ ಮೇಯರ್ ರೊಹ್ರಾನ್ ಮಮ್ದಾನಿಯವರ ನಿದರ್ಶನವನ್ನು ನೀಡಿದ ಪ್ರಿಯಾಂಕಾ, ನೆಹರು ಅವರು ತನ್ನದೇ ದೇಶದಲ್ಲಿ ಅವಮಾನಗಳನ್ನು ಎದುರಿಸುತ್ತಿದ್ದರೂ ಈಗಲೂ ವಿಶ್ವಾದ್ಯಂತ ನಾಯಕರಿಗೆ ಸ್ಫೂರ್ತಿದಾಯಕರಾಗಿದ್ದಾರೆ ಎಂದು ಒತ್ತಿ ಹೇಳಿದರು.

ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ವಾಲ್ಮೀಕಿ ನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು,‘ನಾವು ನಿಮಗೆ ಸೇವೆ ಸಲ್ಲಿಸಲು ಬಯಸಿದ್ದೇವೆ. ದೇಶದ ಸಂಪತ್ತು ನಿಮಗೆ ಸೇರಿದ್ದು ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಿಮ್ಮಲ್ಲಿ ಹಲವರ ಪೂರ್ವಜರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಈ ನೆಲದಲ್ಲಿ ನಿಮ್ಮ ಮತ್ತು ನಮ್ಮ ರಕ್ತ ಚೆಲ್ಲಿದೆ. ಆದರೆ ವಂಶಪಾರಂಪರ್ಯ ರಾಜಕಾರಣ ಎಂದು ವೇದಿಕೆಗಳಿಂದ ಬೊಬ್ಬಿರಿಯುವವರು ಹುತಾತ್ಮತೆ ಸೇರಿದಂತೆ ಈ ತ್ಯಾಗಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು. ಮಾಜಿ ಪ್ರಧಾನಿಗಳಾದ ತನ್ನ ತಂದೆ ಮತ್ತು ಅಜ್ಜಿ ಇಂದಿರಾ ಗಾಂಧಿಯವರ ಹತ್ಯೆಗಳನ್ನು ಅವರು ನೆನಪಿಸಿಕೊಂಡರು.

ಬಿಜೆಪಿ ನೆಹರು ಅವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ ಅವರು, ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಜೆಪಿ ನಾಯಕರು ನೆಹರು ಅವರನ್ನು ನಿಂದಿಸುವಲ್ಲಿ ವ್ಯಸ್ತರಾಗಿರುತ್ತಾರೆ. ದೇಶವನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೆ ಅವರನ್ನೇ ದೂರುತ್ತಾರೆ ಎಂದು ಹೇಳಿದರು.

ನೆಹರು ಅವರು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾಡಿದ್ದ ಪ್ರಸಿದ್ಧ ಭಾಷಣ ‘ಟ್ರೈಸ್ಟ್ ವಿಥ್ ಡೆಸ್ಟಿನಿ’ಯಲ್ಲಿಯ ಐತಿಹಾಸಿಕ ಮಾತುಗಳೊಂದಿಗೆ ಮಮ್ದಾನಿ ತನ್ನ ವಿಜಯೋತ್ಸವ ಭಾಷಣವನ್ನು ಆರಂಭಿಸಿದ್ದನ್ನು ಉಲ್ಲೇಖಿಸಿದ ಅವರು, ಆದರೆ ಇಲ್ಲಿ ನೆಹರು ಅವರ ಸ್ವಂತ ದೇಶದಲ್ಲಿಯೇ ಪ್ರತಿದಿನವೂ ಅವರನ್ನು ಅವಮಾನಿಸಲಾಗುತ್ತಿದೆ ಎಂದು ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News