ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್ ಧರಿಸುವ ಕಾರಣ ಬಹಿರಂಗಪಡಿಸಿದ ರಾಹುಲ್ ಗಾಂಧಿ

Update: 2024-05-06 08:18 GMT

ಹೊಸದಿಲ್ಲಿ: ರಾಹುಲ್ ಗಾಂಧಿಯೇಕೆ ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್ ಧರಿಸುತ್ತಾರೆ? ಈ ಪ್ರಶ್ನೆಗೆ ಕಾಂಗ್ರೆಸ್ ನಾಯಕನ ಬಳಿ ಒಂದಲ್ಲ ಎರಡು ಉತ್ತರಗಳಿವೆ – ಅದು ಪಾರದರ್ಶಕತೆ ಹಾಗೂ ಸರಳತೆಯನ್ನು ಪ್ರದರ್ಶಿಸುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಮಾಧ್ಯಮ ವಾಹಿನಿಗಳಲ್ಲಿ ಬಿಡುಗಡೆ ಮಾಡಿರುವ ಎರಡು ನಿಮಿಷಗಳ ವಿಡಿಯೊದಲ್ಲಿ ಇಂತಹ ಹಲವು ಪ್ರಶ್ನೆಗಗಳಿಗೆ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

ಆ ವಿಡಿಯೊಗೆ “ಕರ್ನಾಟಕದಲ್ಲಿ ಪ್ರಚಾರದ ಒಂದು ದಿನ” ಎಂಬ ಶೀರ್ಷಿಕೆ ನೀಡಲಾಗಿದೆ. ಸೈದ್ಧಾಂತಿಕ ಪ್ರಾಮುಖ್ಯತೆ ಬಗೆಗಿನ ತಮ್ಮ ನಿಲುವಿನ ಕುರಿತೂ ರಾಹುಲ್ ಗಾಂಧಿ ಮಾತನಾಡಿದ್ದಾರೆ.

“ನನ್ನ ದೃಷ್ಟಿಯಲ್ಲಿ ಸೈದ್ಧಾಂತಿಕ ಕುರಿತು ಸ್ಪಷ್ಟ ಗ್ರಹಿಕೆ ಇಲ್ಲದೆ ಒಂದು ದೊಡ್ಡ ಸಂಘಟನೆಯಾಗಿ ನೀವು ಅಧಿಕಾರದ ಹತ್ತಿರ ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಸೈದ್ಧಾಂತಿಕತೆಯಾದ ಬಡವರ ಪರ, ಮಹಿಳೆಯರ ಪರ, ಬಹುತ್ವದ ಪರ ಹಾಗೂ ಎಲ್ಲರನ್ನೂ ಸಮಾನವಾಗಿ ಉಪಚರಿಸುವ ನೀತಿಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ” ಎಂದು ಅವರು ಹೇಳಿದ್ದಾರೆ.

“ಹೀಗಾಗಿ ಸಂಘಟನೆಯ ಹಂತದಲ್ಲಿ, ದೇಶದ ಹಂತದಲ್ಲಿ ಹೋರಾಟವೆಂದಿಗೂ ಸೈದ್ಧಾಂತಿಕತೆ ಕುರಿತಾಗಿರುತ್ತದೆ” ಎಂದು ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೊ ಯಾತ್ರೆಯಿಂದ ಬಿಳಿ ಬಣ್ಣದ ಟಿ ಶರ್ಟ್ ರಾಹುಲ್ ಗಾಂಧಿ ಅವರ ಟ್ರೇಡ್ ಮಾರ್ಕ್ ಆಗಿ ಬದಲಾಗಿದೆ.

ನೀವೇಕೆ ಯಾವಾಗಲೂ ಬಿಳಿ ಬಣ್ಣದ ಟಿ ಶರ್ಟ್ ಧರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, “ಪಾರದರ್ಶಕತೆ ಮತ್ತು ಸರಳತೆ ಹಾಗೂ ನಾನು ಬಟ್ಟೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸರಳವಾಗಿರುವುದನ್ನು ಪರಿಗಣಿಸುತ್ತೇನೆ” ಎಂದು ಹೇಳಿದ್ದಾರೆ.

ಪ್ರಚಾರದಲ್ಲಿನ ಅತ್ಯುತ್ತಮ ಭಾಗ ಯಾವುದು ಎಂಬ ಪ್ರಶ್ನೆಗೆ, “ಅದು ಅಂತ್ಯಗೊಂಡಾಗ” ಎಂದು ರಾಹುಲ್ ಗಾಂಧಿ ತುಂಟ ಉತ್ತರ ನೀಡಿದ್ದಾರೆ.

ಭಾರತ್ ಜೋಡೊ ಯಾತ್ರೆಯಲ್ಲಿ ನಾನು 70 ದಿನಗಳ ಕಾಲ ರಸ್ತೆಯಲ್ಲಿದ್ದೆ ಎಂದು ಹೇಳಿರುವ ರಾಹುಲ್ ಗಾಂಧಿ, ಅದು ಅಭಿಯಾನವಾಗಿರಲಿಲ್ಲ, ಬದಲಿಗೆ ಇನ್ನೂ ಹೆಚ್ಚಿನ ಕಠಿಣ ಕೆಲಸದಲ್ಲಿ ಭಾಗಿಯಾಗಿದ್ದೆ ಎಂದು ಹೇಳಿದ್ದಾರೆ.

ನೀವು ಅಭಿಯಾನದಲ್ಲಿ ಏನನ್ನು ಇಷ್ಟಪಟ್ಟಿರಿ ಹಾಗೂ ಏನನ್ನು ಇಷ್ಟ ಪಡಲಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಹುಲ್ ಗಾಂಧಿ ಪ್ರಶ್ನಿಸುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ.

ವಿಡಿಯೊದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಾಣಿಸಿಕೊಂಡಿದ್ದು, ಅವರು ಸೈದ್ಧಾಂತಿಕತೆಯ ಮಹತ್ವದ ಕುರಿತು ಮಾತನಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News