ಮಂಗಳವಾರ ಎಸ್ಐಆರ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ; ಪ್ರತಿಪಕ್ಷಕ್ಕೆ ರಾಹುಲ್ ಗಾಂಧಿ ನೇತೃತ್ವ
Photo| PTI
ಹೊಸದಿಲ್ಲಿ: ಲೋಕಸಭೆಯಲ್ಲಿ ಮಂಗಳವಾರ ಚುನಾವಣಾ ಸುಧಾರಣೆಗಳು ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಷಯದ ಬಗ್ಗೆ ಮಹತ್ವದ ಚರ್ಚೆ ನಡೆಯಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳು ಕೋರಿದ ಈ ಚರ್ಚೆಯ ನೇತೃತ್ವವನ್ನು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಹಿಸಲಿದ್ದಾರೆ.
ಈ ಚರ್ಚೆಯಲ್ಲಿ ಕಾಂಗ್ರೆಸ್ ನಿಂದ ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ವರ್ಷಾ ಗಾಯಕ್ವಾಡ್, ಮುಹಮ್ಮದ್ ಜಾವೇದ್, ಉಜ್ವಲ್ ರಮಣ್ ಸಿಂಗ್, ಇಶಾ ಖಾನ್ ಚೌಧರಿ, ಮಲ್ಲು ರವಿ, ಇಮ್ರಾನ್ ಮಸೂದ್, ಗೊವಾಲ್ ಪದವಿ ಮತ್ತು ಜ್ಯೋತಿಮಣಿ ಭಾಗವಹಿಸಲಿದ್ದಾರೆ.
ಈ ಇಡೀ ಚರ್ಚೆಗೆ ಒಟ್ಟು 10 ಗಂಟೆಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಚರ್ಚೆಗೆ ಬುಧವಾರ ಉತ್ತರ ನೀಡಲಿದ್ದಾರೆ.
ಚರ್ಚೆಯ ವೇಳೆ, ರಾಹುಲ್ ಗಾಂಧಿ ‘‘ಮತಗಳ್ಳತನ’’ ಮತ್ತು ಭಾರತೀಯ ಚುನಾವಣಾ ಆಯೋಗದ ಉತ್ತರದಾಯಿತ್ವ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ. ಈ ವಿಷಯವು ಅವರ ಇತ್ತೀಚಿನ ರಾಜಕೀಯ ಭಾಷಣಗಳ ಪ್ರಮುಖ ವಿಷಯಗಳ ಪೈಕಿ ಒಂದಾಗಿದೆ. ಮತದಾರರ ಪಟ್ಟಿಗಳಲ್ಲಿ ವೈರುಧ್ಯಗಳಿವೆ, ಚುನಾವಣಾ ವಿಧಿವಿಧಾನಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆ ಮತ್ತು ಚುನಾವಣಾ ಆಯೋಗವು ಆಯ್ದ ಪ್ರಕರಣಗಳಲ್ಲಿ ಮಾತ್ರ ಕ್ರಮ ತೆಗೆದುಕೊಳ್ಳುತ್ತದೆ. ಇದು ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ಮಾಡಿವೆ ಎಂಬುದಾಗಿ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ನಾಯಕರು ದೊಡ್ಡ ಧ್ವನಿಯಲ್ಲಿ ಹೇಳುತ್ತಾ ಬಂದಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವೇಳೆ, ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳ ಮೇಲೆ ಹೇರಲಾಗುತ್ತಿದೆ ಎನ್ನಲಾದ ಅಗಾಧ ಒತ್ತಡದ ಬಗ್ಗೆಯೂ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ಮಾತನಾಡುವ ನಿರೀಕ್ಷೆಯಿದೆ.