ಗೋವಾ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ| "ಆಡಳಿತದ ಕ್ರಿಮಿನಲ್ ವೈಫಲ್ಯ": ರಾಹುಲ್ ಗಾಂಧಿ ಪ್ರತಿಕ್ರಿಯೆ
ಹೊಸದಿಲ್ಲಿ : ಗೋವಾದ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 25 ಮಂದಿ ಮೃತಪಟ್ಟ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಘಾತ ವ್ಯಕ್ತಪಡಿಸಿದ್ದು, ಈ ಕುರಿತು ಸಂಪೂರ್ಣ ಮತ್ತು ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಗೋವಾದ ಅರ್ಪೋರಾದಲ್ಲಿ 20ಕ್ಕೂ ಹೆಚ್ಚು ಜನರ ಪ್ರಾಣಹಾನಿಗೆ ಕಾರಣವಾದ ಭೀಕರ ಅಗ್ನಿ ದುರಂತದಿಂದ ತೀವ್ರ ನೋವುಂಟಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಇದು ಕೇವಲ ಅಪಘಾತವಲ್ಲ, ಸುರಕ್ಷತೆ ಮತ್ತು ಆಡಳಿತದ ಕ್ರಿಮಿನಲ್ ವೈಫಲ್ಯ. ಈ ಬಗ್ಗೆ ಸಂಪೂರ್ಣ, ಪಾರದರ್ಶಕ ತನಿಖೆ ನಡೆಯಬೇಕು. ಅಂತಹ ದುರಂತಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ತಡರಾತ್ರಿ ಗೋವಾದ ಬಿರ್ಚ್ ಬೈ ರೋಮಿಯೊ ಲೇನ್‌ನಲ್ಲಿರುವ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದರು. ಮೃತರಲ್ಲಿ ನಾಲ್ವರು ಪ್ರವಾಸಿಗರು ಮತ್ತು ಹದಿನಾಲ್ಕು ಮಂದಿ ಸಿಬ್ಬಂದಿ ಎಂದು ಗುರುತಿಸಲಾಗಿದೆ. ದುರಂತಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ.