ಜ.15, 2026ರೊಳಗೆ ಜನಗಣತಿ ಸಿಬ್ಬಂದಿ ನೇಮಕಾತಿ ಪೂರ್ಣಗೊಳಿಸಲು ರಾಜ್ಯಗಳಿಗೆ ಸೂಚಿಸಿದ ರಿಜಿಸ್ಟ್ರಾರ್ ಜನರಲ್
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2027ರ ಜನಗಣತಿಗೆ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ, ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿಯನ್ನು ಜನವರಿ 15, 2026ರೊಳಗೆ ಪೂರ್ಣಗೊಳಿಸಬೇಕೆಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ರಿಜಿಸ್ಟ್ರಾರ್ ಜನರಲ್ (RGI) ನೂತನ ಸುತ್ತೋಲೆಯ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಸುತ್ತೋಲೆಯ ಪ್ರಕಾರ, ದೇಶವ್ಯಾಪಿ ನಡೆಯಲಿರುವ ದತ್ತಾಂಶ ಸಂಗ್ರಹಣೆಯ ಪ್ರಮುಖ ಹೊಣೆ ಗಣತಿದಾರರು ಮತ್ತು ಮೇಲ್ವಿಚಾರಕರ ಮೇಲಾಗಿರುತ್ತದೆ. ಪ್ರತಿ ಗಣತಿದಾರರಿಗೆ 700–800 ಜನಸಂಖ್ಯೆಯ ಜವಾಬ್ದಾರಿ ನೀಡಲಾಗುತ್ತಿದ್ದು, ಪ್ರತಿ ಆರು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕನನ್ನು ನಿಯೋಜಿಸುವಂತೆ ಸೂಚಿಸಲಾಗಿದೆ. ಜೊತೆಗೆ, ತುರ್ತು ಪರಿಸ್ಥಿತಿಗಳಿಗೆ ಉಪಯೋಗವಾಗುವಂತೆ 10% ಮೀಸಲು ಸಿಬ್ಬಂದಿಯನ್ನು ಇಡಬೇಕೆಂದು ಸೂಚಿಸಲಾಗಿದೆ.
ಜನಗಣತಿ ನಿಯಮಗಳು–1990ರ ಪ್ರಕಾರ, ಶಿಕ್ಷಕರು, ಗುಮಾಸ್ತರು ಹಾಗೂ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಯ ಸಿಬ್ಬಂದಿಯನ್ನು ಗಣತಿದಾರರಾಗಿ ನೇಮಿಸಬಹುದು. ಮೇಲ್ವಿಚಾರಕರು ಸಾಮಾನ್ಯವಾಗಿ ಗಣತಿದಾರರಿಗಿಂತ ಹಿರಿಯ ಹುದ್ದೆಯವರಾಗಿರಬೇಕು. ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಪ್ರಧಾನ ಜನಗಣತಿ ಅಧಿಕಾರಿಗಳಾಗಿದ್ದು, ವಿಭಾಗಗಳಲ್ಲಿ ವಿಭಾಗೀಯ ಆಯುಕ್ತರು ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾರೆ. ಮಹಾನಗರ ಪ್ರದೇಶಗಳಲ್ಲಿ ಪುರಸಭೆ ಆಯುಕ್ತರು ಪ್ರಧಾನ ಜನಗಣತಿ ಅಧಿಕಾರಿ ಅಥವಾ ಹೆಚ್ಚುವರಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜನಗಣತಿಗಾಗಿ ದೇಶಾದ್ಯಂತ ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸುವ ಯೋಜನೆ ರೂಪಿಸಲಾಗಿದೆ. ನೇಮಕಾತಿ, ಬ್ಲಾಕ್ ಹಂಚಿಕೆ, ಮೇಲ್ವಿಚಾರಣಾ ವಲಯಗಳ ನಿಗದಿ ಮತ್ತು ಕ್ಷೇತ್ರ ಕಾರ್ಯದ ನೈಜ ಸಮಯದ ಪ್ರಗತಿಯ ಮೇಲ್ವಿಚಾರಣೆ ನಡೆಸಲು RGI ‘Census Management and Monitoring System (CMMS)’ ಎಂಬ ಡಿಜಿಟಲ್ ಪೋರ್ಟಲ್ ಅನ್ನು ನಿರ್ಮಿಸಿದೆ.
ಸುತ್ತೋಲೆಯಲ್ಲಿ, 2027ರ ಜನಗಣತಿಯಲ್ಲಿ ಡಿಜಿಟಲ್ ವಿಧಾನಗಳ ಬಳಕೆ ಹೆಚ್ಚಿರುವುದರಿಂದ, ಸಿಬ್ಬಂದಿಗಳ ಗುರುತಿಸುವಿಕೆ ಮತ್ತು CMMS ಪೋರ್ಟಲ್ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮುಂಚಿತವಾಗಿ ಆರಂಭಿಸಿ ಪೂರ್ಣಗೊಳಿಸುವುದು ಅತ್ಯವಶ್ಯಕ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ನೈಜ ದತ್ತಾಂಶ ಸಂಗ್ರಹಣೆಯನ್ನು ನೇಮಕಾತಿಯ ನಂತರ ಮಾಡಬಹುದಾದರೂ, ಗುರುತು ಮತ್ತು ನೋಂದಣಿ ಕಾರ್ಯಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸ್ಪಷ್ಟಪಡಿಸಲಾಗಿದೆ.
2027ರ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವಾದ ಮನೆ ಪಟ್ಟಿ ಮತ್ತು ವಸತಿ ಗಣತಿ ಎಪ್ರಿಲ್ ನಿಂದ ಸೆಪ್ಟೆಂಬರ್ 2026ರ ನಡುವೆ ಪ್ರತಿ ರಾಜ್ಯದ ಅನುಕೂಲಕ್ಕೆ ತಕ್ಕಂತೆ 30 ದಿನಗಳ ಅವಧಿಯಲ್ಲಿ ನಡೆಸಲಾಗುತ್ತದೆ. ಎರಡನೇ ಹಂತವಾದ ಜನಸಂಖ್ಯಾ ಗಣತಿಯನ್ನು ಫೆಬ್ರವರಿ 2027ರಲ್ಲಿ ನಡೆಸಲಾಗುತ್ತಿದ್ದು, ದೇಶದ ಬಹುತೇಕ ಭಾಗಗಳಿಗೆ ಮಾರ್ಚ್ 1, 2027ರ 00:00 ಗಂಟೆಯನ್ನು ಆರಂಭಿಸುವ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಲಡಾಖ್, ಜಮ್ಮು–ಕಾಶ್ಮೀರ ಮತ್ತು ಹಿಮಾವೃತ ಉತ್ತರಾಖಂಡ–ಹಿಮಾಚಲ ಪ್ರದೇಶಗಳಿಗೆ ಅಕ್ಟೋಬರ್ 1, 2026ರ 00:00 ಗಂಟೆಯನ್ನು ಆರಂಭಿಕ ದಿನಾಂಕವಾಗಿ ನಿಗದಿಪಡಿಸಲಾಗಿದೆ.
ಈ ಬಾರಿ ಜನಗಣತಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯಲಿದ್ದು, ಜಾತಿ ಗಣತಿಯನ್ನು ಸಹ ಒಳಗೊಂಡಿರುತ್ತದೆ. ಈ ಬಗ್ಗೆ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು.