ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ವೈದ್ಯಕೀಯ ಮೌಲ್ಯಮಾಪನದಲ್ಲಿದ್ದಾರೆ: ಇಸ್ರೋ
Photo : PTI
ಬೆಂಗಳೂರು: ಆಕ್ಸಿಯಮ್–04 ಮಿಷನ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ವೈದ್ಯಕೀಯ ಮೌಲ್ಯಮಾಪನ ಹಾಗೂ ಚೇತರಿಕೆ ಶಿಷ್ಟಾಚಾರ ಜಾರಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟನೆಯಲ್ಲಿ ತಿಳಿಸಿದೆ.
ಇಸ್ರೋ ಹಾಗೂ ಆಕ್ಸಿಯಮ್ ಸ್ಪೇಸ್‌ನ ವಿಮಾನ ವೈದ್ಯಕೀಯ ತಜ್ಞರ ತಂಡದ ಮೇಲ್ವಿಚಾರಣೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಇದು ಏಳು ದಿನಗಳವರೆಗೆ ಮುಂದುವರೆಯಲಿದೆ. “ಸ್ಪೇಸ್ ಎಕ್ಸ್ ರಿಕವರಿ ತಂಡಗಳು ಕ್ಯಾಪ್ಸುಲ್ ಅನ್ನು ವಾಪಾಸ್ ಪಡೆದು, ಶುಕ್ಲಾ ಅವರನ್ನು ಸ್ಥಿರ ಆರೋಗ್ಯ ಸ್ಥಿತಿಯಲ್ಲಿ ಸುರಕ್ಷಿತವಾಗಿ ಹೊರತೆಗೆಯಲಾಯಿತು,” ಎಂದು ಇಸ್ರೋ ಹೇಳಿದೆ.
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೃದಯರಕ್ತನಾಳ ಮೌಲ್ಯಮಾಪನಗಳು, ಸ್ನಾಯು-ಅಸ್ಥಿಪಂಜರ (ಮಸ್ಕ್ಯುಲೋಸ್ಕೆಲಿಟಲ್) ತಪಾಸಣೆಗಳು, ಮಾನಸಿಕ ಸ್ಥಿತಿಯ ಪರಿಶೀಲನೆ ಮತ್ತು ದೀರ್ಘಾವಧಿಯ ದೈಹಿಕ ಚೇತರಿಕೆಗೆ ಅಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.
ಆಕ್ಸಿಯಮ್–04 ಮಿಷನ್‌ಗಾಗಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆಗೂ ಮುನ್ನ ಇಸ್ರೋ ತನ್ನ ಉನ್ನತ ಮಟ್ಟದ ನಿಯೋಗ ಹಾಗೂ ಮಿಷನ್ ಕಾರ್ಯಾಚರಣೆ ತಂಡವನ್ನು ನಿಯೋಜಿಸಿತ್ತು. ನಂತರ, ಈ ತಂಡ ಹೂಸ್ಟನ್ ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಿಷನ್ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು.