×
Ad

ನ್ಯಾ.ಗವಾಯಿವರ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ ಗೆ ಚಪ್ಪಲಿಯೇಟು; ವೀಡಿಯೊ ವೈರಲ್

Update: 2025-12-09 19:20 IST

Screengrabs: X

ಹೊಸದಿಲ್ಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು CJI ಆಗಿದ್ದಾಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ವೇಳೆ ಅವರ ಮೇಲೆ ಶೂ ಎಸೆದು ಸುದ್ದಿಯಾಗಿದ್ದ ʼವಿವಾದಿತʼ ವಕೀಲ ರಾಕೇಶ್ ಕಿಶೋರ್ ಗೆ ಮಂಗಳವಾರ ಚಪ್ಪಲಿಯೇಟು ಕೊಟ್ಟಿರುವ ಘಟನೆ ನಡೆದಿದೆ. ದಿಲ್ಲಿಯ ಕರ್ಕಾರ್ಡೂಮಾ ನ್ಯಾಯಾಲಯ ಸಂಕೀರ್ಣದಲ್ಲಿ ಆತನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಕಿಶೋರ್ ಗೆ ಚಪ್ಪಲಿಯನ್ನು ಎತ್ತಿ ಹೊಡೆಯಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಜನರು ತಕ್ಷಣ ಮಧ್ಯಪ್ರವೇಶಿಸಿ ದಾಳಿಯನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ದಾಳಿ ನಡೆಸಿದ ವ್ಯಕ್ತಿಯ ಮುಖ ಸ್ಪಷ್ಟವಾಗಿಲ್ಲದ ಕಾರಣ, ಅಪರಿಚ ವ್ಯಕ್ತಿಯ ಗುರುತು ಇನ್ನೂ ನಿಖರವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಚಪ್ಪಲಿಯೇಟು ಬೀಳುತ್ತಿದ್ದಂತೆ ಸ್ವತಃ ರಕ್ಷಣೆಗೆ ಮುಂದಾಗುವ ವಕೀಲ ರಾಕೇಶ್ ಕಿಶೋರ್, ನನ್ನ ಮೇಲೆ ನೀನು ಹಲ್ಲೆ ಮಾಡುತ್ತಿಯಾ…? ನನಗೆ ಹೊಡೆಯುತ್ತಿಯಾ? ಎಂದು ದಾಳಿಕೋರನನ್ನು ಹಿಮ್ಮೆಟ್ಟಿಸುವುದು ಕಾಣಿಸುತ್ತಿದೆ. ಈ ವೇಳೆ ರಾಕೇಶ್ ಸನಾತನ ಧರ್ಮಕ್ಕೆ ಜೈ ಎನ್ನುವುದು ವೀಡಿಯೊದಲ್ಲಿ ಕೇಳಿ ಬರುತ್ತದೆ.

ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ನಲ್ಲಿ CJI ಗವಾಯಿಯವರಿದ್ದ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ ವಕೀಲ ರಾಕೇಶ್ ಕಿಶೋರ್, ಗವಾಯಿ ಅವರತ್ತ ಶೂ ಎಸೆದಿದ್ದ ಘಟನೆ ನಡೆದಿತ್ತು. ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದ್ದ ರಾಕೇಶ್, ಖಜುರಾಹೊದ ವಿಷ್ಣುವಿನ ಶಿರಚ್ಛೇದಿತ ವಿಗ್ರಹ ಪುನಃಸ್ಥಾಪನೆ ವಿಚಾರಣೆಯ ವೇಳೆ CJI ಗವಾಯಿ ನೀಡಿದ ಹೇಳಿಕೆಗಳನ್ನು ಟೀಕಿಸಿದ್ದ. ಬುಲ್ಡೋಝರ್ ಧ್ವಂಸಗಳ ಕುರಿತ ಗವಾಯಿ ಅವರ ಅಭಿಪ್ರಾಯಕ್ಕೂ ಆತ ವಿರೋಧ ವ್ಯಕ್ತಪಡಿಸಿದ್ದ.

ಘಟನೆಯ ನಂತರ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಿಶೋರ್ ನ ವಕೀಲ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಕೂಡ ಆತನ ಸದಸ್ಯತ್ವವನ್ನು ರದ್ದು ಮಾಡಿತ್ತು. ಅಟಾರ್ನಿ ಜನರಲ್ ಅವರ ಮೇಲಿನ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನೀಡಿದ್ದರೂ, ನಂತರ ಪೀಠವು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರಿರಲಿಲ್ಲ.

ಮಂಗಳವಾರ ರಾಕೇಶ್ ಕಿಶೋರ್ ಮೇಲೆ ನಡೆದ ದಾಳಿಯ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಬಾರ್ ಅಸೋಸಿಯೇಷನ್ಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಇದಕ್ಕೆ ಸಂಬಂಧಿಸಿ ದೂರು ದಾಖಲಾಗಿದೆಯೋ ಇಲ್ಲವೋ ಎಂಬುದೂ ತಿಳಿದುಬಂದಿಲ್ಲ ಎಂದು barandbench.com ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News