ಒಂದು ರಾಜ್ಯದ ಅಭಿವೃದ್ಧಿಯನ್ನು ಅಳೆಯುವುದು ಕೇವಲ ಬೃಹತ್ ಕೈಗಾರಿಕೆಗಳ ಸಂಖ್ಯೆ, ವಿದೇಶಿ ಹೂಡಿಕೆಗಳ ಪ್ರಮಾಣ ಅಥವಾ ಕಾರ್ಪೊರೇಟ್ ಕಂಪೆನಿಗಳ ಬೆಳವಣಿಗೆಯಿಂದ ಮಾತ್ರ ಸಾಧ್ಯವಿಲ್ಲ. ಆ ರಾಜ್ಯದ ಕಟ್ಟಕಡೆಯ ವ್ಯಕ್ತಿಯ ಬದುಕು ಎಷ್ಟು ಸುಧಾರಿಸಿದೆ, ದುಡಿಯುವ ಮಹಿಳೆಗೆ ಎಷ್ಟು ಗೌರವ ಸಿಕ್ಕಿದೆ, ಬಡ ಕುಟುಂಬಗಳಿಗೆ ಎಷ್ಟು ಭದ್ರತೆ ದೊರೆತಿದೆ ಎಂಬುದರ ಮೇಲೆಯೂ ಅಭಿವೃದ್ಧಿಯನ್ನು ಅಳೆಯಬೇಕು.

ಆದರೆ ಕರ್ನಾಟಕದ ಆರ್ಥಿಕ ಆದ್ಯತೆಗಳನ್ನು ಗಮನಿಸಿದಾಗ ಒಂದು ಗಂಭೀರ ಪ್ರಶ್ನೆ ಎದುರಾಗುತ್ತದೆ. ಬೃಹತ್ ಕಾರ್ಪೊರೇಟ್ ಕಂಪೆನಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಪ್ರೋತ್ಸಾಹಧನ ಮತ್ತು ರಿಯಾಯಿತಿಗಳನ್ನು ನೀಡುವ ಸರಕಾರಕ್ಕೆ, ಜನರ ಆರೋಗ್ಯಕ್ಕಾಗಿ ಹಗಲಿರುಳು ದುಡಿಯುವ 41,000 ಆಶಾ ಕಾರ್ಯಕರ್ತೆಯರ ಬದುಕಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲವೇ?

ಇದು ಕೇವಲ ಹಣದ ಲೆಕ್ಕಾಚಾರವಲ್ಲ. ಇದು ಸಾಮಾಜಿಕ ನ್ಯಾಯದ ಪ್ರಶ್ನೆ. ಮಹಿಳೆಯರ ಶ್ರಮಕ್ಕೆ ಸಿಗಬೇಕಾದ ಗೌರವದ ಪ್ರಶ್ನೆ. ಸರಕಾರದ ಆದ್ಯತೆಗಳ ಪ್ರಶ್ನೆ.

ಜನರ ಆರೋಗ್ಯದ ಹೊಣೆ ಹೊತ್ತಿರುವ

ಮಹಿಳೆಯರ ಬದುಕು ಮಾತ್ರ ಅಸುರಕ್ಷಿತ!

ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ.

ಹಳ್ಳಿಗಳಿಂದ ನಗರದ ಕೊಳಚೆ ಪ್ರದೇಶಗಳವರೆಗೆ ಮನೆಮನೆಗೆ ತೆರಳಿ ಗರ್ಭಿಣಿಯರ ಆರೋಗ್ಯ ವಿಚಾರಿಸುವವರು, ಬಾಣಂತಿಯರ ಆರೈಕೆಗೆ ನೆರವಾಗುವವರು, ಮಕ್ಕಳಿಗೆ ಲಸಿಕೆ ಕೊಡಿಸುವವರು, ಅಪೌಷ್ಟಿಕತೆಯ ವಿರುದ್ಧ ಜಾಗೃತಿ ಮೂಡಿಸುವವರು, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಜನರ ನಡುವೆ ನಿಂತು ಸೇವೆ ಸಲ್ಲಿಸುವವರು ಆಶಾ ಕಾರ್ಯಕರ್ತೆಯರು.

ಒಂದು ಮಗು ಆರೋಗ್ಯವಾಗಿ ಹುಟ್ಟಬೇಕು, ತಾಯಿ ಸುರಕ್ಷಿತವಾಗಿರಬೇಕು, ಬಡ ಕುಟುಂಬಕ್ಕೆ ಆರೋಗ್ಯ ಸೇವೆ ತಲುಪಬೇಕು ಎಂಬ ಉದ್ದೇಶದಿಂದ ತಮ್ಮ ಸಮಯ, ಶ್ರಮ ಮತ್ತು ಬದುಕಿನ ಬಹುಭಾಗವನ್ನು ಸಮಾಜಕ್ಕಾಗಿ ಮೀಸಲಿಡುವವರು ಇವರು.

ಕೊರೋನ ಮಹಾಮಾರಿಯಂತಹ ಸಂಕಷ್ಟದ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡಿದ್ದಾರೆ. ಮನೆಮನೆಗೆ ತೆರಳಿ ಆರೋಗ್ಯದ ಮಾಹಿತಿ ಸಂಗ್ರಹಿಸಿದ್ದಾರೆ. ರೋಗಿಗಳ ಮಾಹಿತಿ ನೀಡಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಆದರೆ ಇಷ್ಟೆಲ್ಲಾ ಸೇವೆ ಸಲ್ಲಿಸಿದ ಮಹಿಳೆಯರು ತಮ್ಮದೇ ಬದುಕಿನ ಭದ್ರತೆಗಾಗಿ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ಇರುವುದು ನಮ್ಮ ಸಮಾಜದ ದುರಂತವಲ್ಲವೇ? ಜನರ ಆರೋಗ್ಯವನ್ನು ಕಾಪಾಡುವವರ ಆರೋಗ್ಯ ಮತ್ತು ಬದುಕಿನ ಭದ್ರತೆಯನ್ನು ಕಾಪಾಡುವವರು ಯಾರು?

2026ರ ಜೂನ್ 10ರಂದು ಪ್ರಕಟವಾದ Deccan Herald ಪತ್ರಿಕಾ ವರದಿಯ ಪ್ರಕಾರ, ಕರ್ನಾಟಕ ಸರಕಾರ ಕಳೆದ ಮೂರು ವರ್ಷಗಳಲ್ಲಿ ವಿವಿಧ ಕೈಗಾರಿಕಾ ಕಂಪೆನಿಗಳಿಗೆ ಸುಮಾರು ರೂ. 10,980 ಕೋಟಿ ಮೌಲ್ಯದ ಪ್ರೋತ್ಸಾಹಧನ, ಸಾಲ ಮತ್ತು ರಿಯಾಯಿತಿಗಳನ್ನು ಒದಗಿಸಿದೆ.

ವರದಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಕಿಅಂಶಗಳು ಹೀಗಿವೆ:

1. Foxconn ಕಂಪೆನಿ ರೂ. 6,970 ಕೋಟಿ

ದೇವನಹಳ್ಳಿಯಲ್ಲಿ ರೂ. 21,911 ಕೋಟಿ ಹೂಡಿಕೆಯ ಮೊಬೈಲ್ ಉತ್ಪಾದನಾ ಘಟಕ ಸ್ಥಾಪಿಸುವ ಹಿನ್ನೆಲೆಯಲ್ಲಿ ಕಂಪೆನಿಗೆ ರೂ. 6,970 ಕೋಟಿ ಮೌಲ್ಯದ ಪ್ರೋತ್ಸಾಹಧನದ ಪ್ಯಾಕೇಜ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.

2. 38 ದೊಡ್ಡ ಉದ್ಯಮಗಳು ರೂ. 2,955 ಕೋಟಿ

ಮೌಲ್ಯವರ್ಧಿತ ತೆರಿಗೆ ಪಾವತಿಗೆ ಸಂಬಂಧಿಸಿದಂತೆ 38 ದೊಡ್ಡ ಉದ್ಯಮಗಳಿಗೆ ರೂ. 2,955 ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ.

3. 82 ದೊಡ್ಡ ಕಂಪೆನಿಗಳು ರೂ. 680.95 ಕೋಟಿ

ಕೈಗಾರಿಕಾ ನೀತಿಯ ಅಡಿಯಲ್ಲಿ 2023ರಿಂದ 82 ದೊಡ್ಡ ಕಂಪೆನಿಗಳಿಗೆ ರೂ. 680.95 ಕೋಟಿ ಮೌಲ್ಯದ ರಿಯಾಯಿತಿಗಳನ್ನು ನೀಡಲಾಗಿದೆ.

4. ಇಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ ರೂ. 374.33 ಕೋಟಿ

ಇಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ ನೀಡುವ ESDM ನೀತಿಯಡಿ ರೂ. 374.33 ಕೋಟಿ ವಿತರಿಸಲಾಗಿದೆ.

ಈ ಮೊತ್ತಗಳ ಒಟ್ಟು ರೂ. 10,980.28 ಕೋಟಿ.

ಇಲ್ಲಿ ಒಂದು ಸ್ಪಷ್ಟನೆ ಅಗತ್ಯ. ಈ ಮೊತ್ತವೆಲ್ಲವೂ ಕಂಪೆನಿಗಳ ಖಾತೆಗೆ ನೇರವಾಗಿ ನಗದು ರೂಪದಲ್ಲಿ ಜಮೆಯಾಗಿರುವ ಹಣವಲ್ಲ. ಇದರಲ್ಲಿ ಪ್ರೋತ್ಸಾಹಧನದ ಪ್ಯಾಕೇಜ್, ಬಡ್ಡಿರಹಿತ ಸಾಲ, ತೆರಿಗೆ ಸಂಬಂಧಿತ ರಿಯಾಯಿತಿಗಳು ಮತ್ತು ವಿತರಿಸಿದ ಪ್ರೋತ್ಸಾಹಧನ ಸೇರಿವೆ.

ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ಹಣಕಾಸಿನ ನೆರವು ನೀಡುವುದರಲ್ಲಿ ತಪ್ಪಿಲ್ಲ. ಉದ್ಯೋಗ ಸೃಷ್ಟಿಯಾಗಬೇಕು, ಹೂಡಿಕೆ ಬರಬೇಕು, ಆರ್ಥಿಕತೆ ಬೆಳೆಯಬೇಕು. ಆದರೆ ಇದೇ ಅಭಿವೃದ್ಧಿಯ ಮಾದರಿಯಲ್ಲಿ ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರ ಬದುಕಿಗೂ ಸಮಾನ ಆದ್ಯತೆ ಸಿಗಬೇಕಲ್ಲವೇ?

ಕರ್ನಾಟಕದಲ್ಲಿ ಸುಮಾರು 41,000 ಆಶಾ ಕಾರ್ಯಕರ್ತೆಯರಿದ್ದಾರೆ.

ಕೈಗಾರಿಕಾ ಕಂಪೆನಿಗಳಿಗೆ ನೀಡಿರುವ ಸುಮಾರು ರೂ. 10,980 ಕೋಟಿ ಮೊತ್ತದ ಎದುರು, ಒಂದು ವರ್ಷಕ್ಕೆ ಛಿಛಿಡಿಡಿಡಿಡಿಡಿಡಿಛಿಡಿಡಿ41,000 ಆಶಾ ಕಾರ್ಯಕರ್ತರಿಗೆ ಹೆಚ್ಚುವರಿಯಾಗಿ ತಿಂಗಳಿಗೆ ತಲಾ ರೂ. 10,000 ನೀಡಲು ಬೇಕಾಗಿರುವುದು ರೂ.492 ಕೋಟಿ ಮಾತ್ರ.

ಇದು ಎರಡು ವಿಭಿನ್ನ ಬಜೆಟ್ ವೆಚ್ಚಗಳ ನೇರ ಹೋಲಿಕೆಯಲ್ಲ. ಆದರೆ ಸರಕಾರದ ಆರ್ಥಿಕ ಆದ್ಯತೆಗಳ ಬಗ್ಗೆ ಚರ್ಚೆ ನಡೆಸಲು ಈ ಅಂಕಿಅಂಶಗಳು ಖಂಡಿತವಾಗಿಯೂ ಮಹತ್ವದ ಪ್ರಶ್ನೆಯನ್ನು ಮುಂದಿಡುತ್ತವೆ.

ಒಂದು ಕಡೆ ಬೃಹತ್ ಕಂಪೆನಿಗಳ ಹೂಡಿಕೆಗೆ ಪ್ರೋತ್ಸಾಹಧನ, ಮತ್ತೊಂದು ಕಡೆ ಜನರ ಆರೋಗ್ಯದ ಹೊಣೆ ಹೊತ್ತ ಮಹಿಳೆಯರಿಗೆ ನ್ಯಾಯಯುತ ಗೌರವಧನಕ್ಕಾಗಿ ಹೋರಾಟ!

ಹಾಗಾದರೆ ಅಭಿವೃದ್ಧಿಯ ಲಾಭ ಯಾರಿಗೆ ತಲುಪುತ್ತಿದೆ?

2025ರ ಜನವರಿಯಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಂಗಳಿಗೆ ರೂ. 10,000 ನಿಗದಿತ ಗೌರವಧನ ನೀಡುವ ಭರವಸೆ ನೀಡಿದ್ದರು ಎಂದು ಪತ್ರಿಕಾ ವರದಿಗಳು ತಿಳಿಸಿವೆ. ಆದರೆ ಆ ಭರವಸೆಯ ಅನುಷ್ಠಾನದ ಕುರಿತು ವಿವಾದ ಮುಂದುವರಿದಿದೆ. 2026ರ ನವೆಂಬರ್‌ನಲ್ಲಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.

ಅವರು ಈಗ ತಿಂಗಳಿಗೆ ರೂ.15,000 ನಿಗದಿತ ಗೌರವಧನ, ಬಾಕಿ ಪ್ರೋತ್ಸಾಹಧನ ಬಿಡುಗಡೆ, ನಿವೃತ್ತಿ ಸೌಲಭ್ಯ, ಕೆಲಸದ ಭದ್ರತೆ ಹಾಗೂ ಇತರ ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಬೇಡಿಕೆ ಇಟ್ಟಿದ್ದಾರೆ.

ನವೆಂಬರ್ 20ರಂದು ಪ್ರಕಟವಾದ ವರದಿಯ ಪ್ರಕಾರ, ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದ್ದಾರೆ. ಸುಮಾರು 41,000 ಕಾರ್ಯಕರ್ತೆಯರ ಬೇಡಿಕೆಗಳನ್ನು ಹಣಕಾಸು ಇಲಾಖೆ ಮತ್ತು ಸಚಿವ ಸಂಪುಟದೊಂದಿಗೆ ಚರ್ಚಿಸುವುದಾಗಿ ಸರಕಾರ ತಿಳಿಸಿದೆ.

ವರ್ಷಗಳ ಕಾಲ ದುಡಿದ ನಂತರವೂ ತಮ್ಮ ಜೀವನದ ಭದ್ರತೆಗಾಗಿ ಹೋರಾಡಬೇಕಾದ ಸ್ಥಿತಿ ಏಕೆ?

ಸರಕಾರದ ಭರವಸೆಗಳು ಕೇವಲ ಪ್ರತಿಭಟನೆ ನಿಲ್ಲಿಸುವ ಸಾಧನಗಳಾಗಬಾರದು. ಅವು ಕಾರ್ಯರೂಪಕ್ಕೆ ಬರಬೇಕು. ದುಡಿಯುವ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರಬೇಕು. ಮಹಿಳಾ ಸಬಲೀಕರಣ ಭಾಷಣಗಳಲ್ಲಿ ಅಲ್ಲ, ಬದುಕಿನಲ್ಲಿ ಕಾಣಬೇಕು!

ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವಾಗ ಮಹಿಳೆಯರಿಗೆ ಉದ್ಯೋಗ, ಸ್ವಾವಲಂಬನೆ, ಸಮಾನತೆ ಮತ್ತು ಗೌರವದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಲಾಗುತ್ತದೆ. ಆದರೆ ಸಮಾಜದ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರಿಗೆ ನ್ಯಾಯಯುತ ಗೌರವಧನ ನೀಡಲು ಹೋರಾಟ ಮಾಡಬೇಕಾದರೆ, ಆ ಸಬಲೀಕರಣದ ಅರ್ಥವೇನು?

ಒಬ್ಬ ಮಹಿಳೆ ಬೆಳಗ್ಗೆಯಿಂದ ಸಂಜೆಯವರೆಗೆ ಮನೆಮನೆಗೆ ತೆರಳಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾಳೆ. ಆದರೆ ತಿಂಗಳ ಕೊನೆಯಲ್ಲಿ ತನ್ನ ಮನೆಯ ಖರ್ಚು, ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಆಕೆಗೆ ಸಾಕಷ್ಟು ಆದಾಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾದವರು ಯಾರು?

ಆಶಾ ಕಾರ್ಯಕರ್ತೆಯರು ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಾಧನಗಳಲ್ಲ. ಅವರಿಗೂ ಕುಟುಂಬವಿದೆ, ಮಕ್ಕಳಿದ್ದಾರೆ, ಕನಸುಗಳಿವೆ, ಗೌರವಯುತವಾಗಿ ಬದುಕುವ ಹಕ್ಕಿದೆ. ಅವರ ಸೇವೆಗೆ ತಕ್ಕ ಆರ್ಥಿಕ ಮೌಲ್ಯ ನೀಡುವುದು ಸರಕಾರದ ದಯೆಯಲ್ಲ; ಅದು ಅವರ ಶ್ರಮಕ್ಕೆ ಸಲ್ಲಬೇಕಾದ ನ್ಯಾಯ.

ಅಭಿವೃದ್ಧಿ ಎಂದರೆ ಕಂಪೆನಿಗಳ ಲಾಭವಷ್ಟೇ ಅಲ್ಲ, ಜನರ ಬದುಕಿನ ಗೌರವವೂ ಹೌದು!

ಕೈಗಾರಿಕೆಗಳ ಬೆಳವಣಿಗೆಯನ್ನು ವಿರೋಧಿಸಬಾರದು. ಉದ್ಯೋಗ ಸೃಷ್ಟಿಯಾಗಲಿ, ಹೂಡಿಕೆ ಹೆಚ್ಚಾಗಲಿ, ರಾಜ್ಯದ ಆರ್ಥಿಕತೆ ಬಲಗೊಳ್ಳಲಿ ಎಂಬುದು ಎಲ್ಲರ ಆಶಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ದುಡಿಯುವ ಜನರ ಶ್ರಮವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಒಂದು ರಾಜ್ಯದ ನಿಜವಾದ ಪ್ರಗತಿ ಅದರ ಶ್ರೀಮಂತ ಕಂಪೆನಿಗಳ ಸಂಖ್ಯೆಯಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಆ ರಾಜ್ಯದ ಬಡ ಮಹಿಳೆ ಎಷ್ಟು ಗೌರವದಿಂದ ಬದುಕುತ್ತಿದ್ದಾಳೆ, ಕಾರ್ಮಿಕನಿಗೆ ಎಷ್ಟು ಭದ್ರತೆ ಇದೆ, ಮಗುವಿಗೆ ಎಷ್ಟು ಉತ್ತಮ ಆರೋಗ್ಯ ಮತ್ತು ಶಿಕ್ಷಣ ದೊರೆಯುತ್ತಿದೆ ಎಂಬುದರ ಮೇಲೆಯೂ ನಿರ್ಧಾರವಾಗುತ್ತದೆ.

ಕೈಗಾರಿಕೆಗಳಿಗೆ ಪ್ರೋತ್ಸಾಹಧನ ನೀಡುವ ಸರಕಾರವು ಜನರ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಬದುಕಿಗೂ ಅದೇ ರೀತಿಯ ಬದ್ಧತೆಯನ್ನು ತೋರಿಸಬೇಕು.

ಆಶಾ ಕಾರ್ಯಕರ್ತೆಯರ ಹೋರಾಟ ಕೇವಲ 41,000 ಮಹಿಳೆಯರ ವೈಯಕ್ತಿಕ ಬೇಡಿಕೆಯಲ್ಲ. ಅದು ಮಹಿಳಾ ಶ್ರಮದ ಮೌಲ್ಯ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಲವರ್ಧನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ.

ಕಂಪೆನಿಗಳಿಗೆ ಹೂಡಿಕೆಯ ಭದ್ರತೆ ಬೇಕಾದರೆ, ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರಿಗೆ ಬದುಕಿನ ಭದ್ರತೆ ಬೇಡವೇ?

ಹಾಗಾಗಿ ಸರಕಾರ ಆಶಾ ಕಾರ್ಯಕರ್ತೆಯರ ನ್ಯಾಯಯುತ ಗೌರವಧನದ ಬೇಡಿಕೆಯನ್ನು ಈಡೇರಿಸಬೇಕು. ಅವರಿಗೆ ಗೌರವಯುತ ಬದುಕು, ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ರಕ್ಷಣೆ ಒದಗಿಸಬೇಕು. ಸರಕಾರ ನೀಡಿದ ಭರವಸೆಗಳು ಕಾಗದದ ಮೇಲಷ್ಟೇ ಉಳಿಯದೆ ಕಾರ್ಯರೂಪಕ್ಕೆ ಬರಬೇಕು.

ಏಕೆಂದರೆ ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರ ಬದುಕು ಅಸುರಕ್ಷಿತವಾಗಿರುವ ಸಮಾಜವನ್ನು ಅಭಿವೃದ್ಧಿ ಹೊಂದಿದ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ.

ಸಾಮಾಜಿಕ ನ್ಯಾಯವೆಂದರೆ ಭಾಷಣಗಳಲ್ಲಿ ಕೇಳಿಸುವ ಘೋಷಣೆಯಲ್ಲ; ದುಡಿಯುವ ಜನರ ಬದುಕಿನಲ್ಲಿ ಅನುಷ್ಠಾನಗೊಳ್ಳುವ ಹಕ್ಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor