ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಒಲಿ ಆಯ್ಕೆ

Update: 2015-10-17 07:28 GMT
ಕಠ್ಮಂಡು, ಅ.11: ನೇಪಾಳದ ಮುಂದಿನ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಒಲಿ ಆಯ್ಕೆ ಯಾಗಿದ್ದಾರೆ.  ರಾಷ್ಟ್ರದ ನೂತನ ಸಂವಿಧಾನದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆ ರಾಜಕೀಯ ಪಕ್ಷಗಳು ಒಮ್ಮತವನ್ನು ಸಾಧಿಸುವಲ್ಲಿ ವಿಫಲವಾದ ಬಳಿಕ ನಡೆದ ಮತದಾನ ದಲ್ಲಿ ಸುಶೀಲ್ ಕೊಯ್ರಿಲ ಹಾಗೂ ಒಲಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.ಸಂಸತ್ತಿನಲ್ಲಿ ರವಿವಾರ ನಡೆದ ಮತದಾನದಲ್ಲಿ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಕೆ.ಪಿ. ಶರ್ಮಾ ಒಲಿ 338 ಮತಗಳನ್ನು ಪಡೆಯುವ ಮೂಲಕ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಅವರ ಪ್ರತಿಸ್ಪರ್ಧಿ ಸುಶೀಲ್ ಕೊಯ್ರೆಲ ಕೇವಲ 249 ಮತಗಳನ್ನು ಪಡೆದರು. ಪ್ರಧಾನಿಯಾಗಿ ಆಯ್ಕೆಯಾಗಲು 299 ಮತಗಳ ಅಗತ್ಯವಿದ್ದು, ಒಲಿಯವರು 39 ಹೆಚ್ಚು ಮತಗಳನ್ನು ಪಡೆದಂತಾಗಿದೆ.

ಸಂಸತ್ತಿನ ಎಲ್ಲ 587 ಸದಸ್ಯರು ಮತ ಚಲಾಯಿಸಿದರು. ಸಂಸದರು ಮತದಾನದ ವೇಳೆ ತಟಸ್ಥ ನೀತಿ ಅನುಸರಿಸಲು ಅವಕಾಶವಿರಲಿಲ್ಲ. 63ರ ಹರೆಯದ ಒಲಿ ಕಳೆದ ವರ್ಷ ಸಿಪಿಎನ್-ಯುಎಂಎಲ್‌ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಪಕ್ಷದ ಉನ್ನತ ಹುದ್ದೆಗೆ ಆಯ್ಕೆಯಾಗುವ ಮುನ್ನ ಅವರು ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.2006ರಲ್ಲಿ ಪೀಪಲ್ಸ್ ಮೂವ್‌ಮೆಂಟ್‌ನ ಬಳಿಕ ರಚಿಸಲಾಗಿದ್ದ ಗಿರಿಜಾಪ್ರಸಾದ್ ಕೊಯ್ರ್‌ಲ ನೇತೃತ್ವದ ಮಧ್ಯಾಂತರ ಸರಕಾರದಲ್ಲಿ ಒಲಿಯವರು ರಾಷ್ಟ್ರದ ಉಪ ಪ್ರಧಾನಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೇವೆ ಸಲ್ಲಿಸಿದ್ದರು. ಮನ್‌ಮೋಹನ್ ಅಧಿಕಾರಿ ನೇತೃತ್ವದ ಆಗಿನ 1994ರ ಸಂಪುಟದಲ್ಲಿ ಒಲಿಯವರು ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.1991, 1994 ಹಾಗೂ 1999ರಲ್ಲಿ ಹೀಗೆ ಒಟ್ಟು ಮೂರು ಬಾರಿ ಒಲಿಯವರು ನೇಪಾಳದ ಸಂಸದರಾಗಿ ಆಯ್ಕೆಯಾಗಿದ್ದರು.ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿರುವ ಸಂದರ್ಭದಲ್ಲೇ ಒಲಿಯವರು ಪ್ರಧಾನಿಯಾಗಿ ಆಯ್ಕೆಗೊಂಡಿದ್ದು ಹೆಚ್ಚಿನ ಕುತೂಹಲ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor