ಭಾರತದ ‘ಕುಲ ತಿಲಕ’ರ ಪರಾಮರ್ಶೆ

Update: 2015-10-17 05:52 GMT
‘ಸ್ವರಾಜ್ಯ’ದಲ್ಲೇ ಶಾಹು ಮಹಾರಾಜರಿಗೆ ‘ಸತ್ಕಾರ’
1894ರಲ್ಲಿ ಪಟ್ಟಾಭಿಷೇಕವಾಗಿ ರಾಜರ್ಷಿ ಶಾಹು ಮಹಾರಾಜರು ಕೊಲ್ಹಾಪುರದ ಅಧಿಕಾರ ವಹಿಸಿಕೊಂಡರು. 1901ರ ಶ್ರಾವಣ ಮಾಸದಲ್ಲಿ ಶಾಹು ಮಹಾರಾಜರು ಪಂಚಗಂಗಾ ನದಿ ಸ್ನಾನಕ್ಕೆ ಹೋದಾಗ ಒಂದು ಮಹತ್ತರ ಘಟನೆ ನಡೆಯಿತು. ರೂಢಿಯಂತೆ ಮಹಾರಾಜರು ಶ್ರಾವಣ ಮಾಸದಲ್ಲಿ ನದಿ ಸ್ನಾನ ಮಾಡುವಾಗ ಆಸ್ಥಾನ ಪುರೋಹಿತರು ಮಂತ್ರೋಚ್ಚಾರಣೆ ಮಾಡುತ್ತಾರೆ. ಹಾಗೆ ಕೊಲ್ಹಾಪುರದ ಆಸ್ಥಾನ ಪುರೋಹಿತ ನಾರಾಯಣ ರಾಜ್ಯೋಪಾಧ್ಯಾಯನಿಗೆ ಬುಲಾವು ಹೋಯಿತು. ಆ ಹೊತ್ತಿಗೆ ಈ ವೈದಿಕ ಮಹಾಶಯರು ತಮ್ಮ ವೇಶ್ಯೆಯ ಮನೆಯಲ್ಲಿದ್ದರಂತೆ. ಹಾಗಾಗಿ ಸ್ನಾನ, ಸಂಧ್ಯಾವಂದನೆ ಏನೂ ಆಗಿರಲಿಲ್ಲ. ಆದರೂ ಈ ರಾಜ ಪುರೋಹಿತರು ಸೀದಾ ನದೀ ತೀರಕ್ಕೆ ಬಂದು ಮಂತ್ರೋಚ್ಚಾರಣೆ ಶುರು ಮಾಡಿದರು. ಅಷ್ಟು ಹೊತ್ತಿಗೆ ಅಲ್ಲಿದ್ದ ಇನ್ನೊಬ್ಬ ಪುರೋಹಿತ ರಾಜಾರಾಮ ಶಾಸ್ತ್ರಿ ಪುರೋಹಿತರು ಈ ಮಂತ್ರೋಚ್ಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ತಕರಾರು ತೆಗೆದರು. ಆಗ ಈ ನಾರಾಯಣ ರಾಜ್ಯೋಪಾಧ್ಯಾಯ ಯಾವುದೇ ಅಂಜಿಕೆ ಅಳುಕಿಲ್ಲದೆ:
‘‘ನೋಡಿ ಸ್ವಾಮಿ, ನಿಮ್ಮ ಈ ಮಹಾರಾಜರು ಶೂದ್ರ ವರ್ಣಕ್ಕೆ ಸೇರಿದ ಕುಣಬಿ ಜಾತಿಯವರು. ಇಂತಹ ಕೀಳು ಜಾತಿಯ ಜನರ ಸಮ್ಮುಖದಲ್ಲಿ ಸ್ನಾನವನ್ನು ಮಾಡಿ ಹೇಳುವ ವೇದೋಕ್ತ ಮಂತ್ರಗಳನ್ನು ಪಠಿಸಬೇಕಿಲ್ಲ. ನಾನು ಪುರಾಣೋಕ್ತ ಮಂತ್ರಗಳನ್ನಷ್ಟೇ ಹೇಳಲು ಸಾಧ್ಯ. ನೀವು ಏನಾದರೂ ಮಾಡಿಕೊಳ್ಳಿ’’ ಎಂದು ಮಹಾರಾಜರ ಸಮ್ಮುಖದಲ್ಲೇ ಧಮಕಿ ಹಾಕಿದ.
ಸಹಜವಾಗಿ ಮಹಾರಾಜರು ರಾಜನಿಂದೆಯ ಆರೋಪದ ಮೇಲೆ ಇವನನ್ನು ಗಲ್ಲಿಗೇರಿಸಬಹುದಿತ್ತು. ಆದರೆ ಶಾಹು ಮಹಾರಾಜರದ್ದು ರಾಜರ್ಷಿ ಸ್ವರೂಪದ ವ್ಯಕ್ತಿತ್ವ. ವಿಶೇಷವೆಂದರೆ ಮಹಾರಾಜರು ತಮ್ಮ ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಸಂಘಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿದ್ದರಲ್ಲದೇ, ಅತ್ಯಂತ ಪ್ರಗತಿಪರ ಕಾರ್ಮಿಕ ಕಾನೂನುಗಳನ್ನೂ ಸಹ ಜಾರಿಮಾಡಿದ್ದರು. ಮಹಾರಾಜರಲ್ಲಿನ ಅಪಾರ ಅನುಕಂಪ ಜಾಗೃತವಾಗಿ, ಈ ‘ಪೊಂಗ’ ಪಂಡಿತನಿಗೆ ಮೂರು ತಿಂಗಳ ಸಮಯಾವಕಾಶ ನೀಡಿ ವೇದೋಕ್ತ ಮಂತ್ರೋಚ್ಚಾರಣೆ ಮಾಡುವ ರಾಜಾಜ್ಞೆ ಹೊರಡಿಸಿದರು. ಮೂರು ತಿಂಗಳು ಎಂದು ರಾಜಾಜ್ಞೆ ಇದ್ದರೂ ಮೂರು ತಿಂಗಳ ನಂತರವೂ ಮಹಾರಾಜರು ಈ ‘ಪಂಡಿತ’ನ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕೆಲಸದಿಂದ ವಜಾ ಕೂಡ ಮಾಡಲಿಲ್ಲ. ಒಂಬತ್ತು ತಿಂಗಳು ಕಳೆದವು, ಈ ಪುರೋಹಿತ ಬಗ್ಗಲಿಲ್ಲವೆಂದರೆ ಅವನ ದುರಹಂಕಾರ ಯಾವ ಮಟ್ಟದಲ್ಲಿತ್ತು ಗಮನಿಸಿ!
7, 8 ನವೆಂಬರ್, 1901 ಮತ್ತು ಕೊನೆಯದಾಗಿ 1 ಮೇ, 1902 ಹೀಗೆ ಮೂರು ಕಾರಣ ಕೇಳಿ ನೋಟಿಸು ಜಾರಿ ಮಾಡಲಾಯಿತು. ಈ ಪಂಡಿತ ಅವ್ಯಾವ ನೋಟಿಸುಗಳಿಗೂ ಜಗ್ಗಲಿಲ್ಲ. ಕೊನೆಗೆ ಕಾಟಾಚಾರಕ್ಕೆಂದು ಒಂದು ಉತ್ತರ ರವಾನಿಸಿದ ‘‘ನೀವು ಕ್ಷತ್ರಿಯರೇ ಅಲ್ಲ; ಆದ್ದರಿಂದ ನಿಮ್ಮ ಸಮ್ಮುಖದಲ್ಲಿ ನಾನು ವೇದಮಂತ್ರ ಗಳನ್ನು ಪಠಿಸಲಾರೆ.’’
ಸಹಜವಾಗಿಯೇ ಎಲ್ಲ ಸ್ವಾಭಾವಿಕ ನ್ಯಾಯ (್ಞಠ್ಠ್ಟಿಚ್ಝ ್ಜ್ಠಠಿಜ್ಚಿಛಿ)ದ ಪ್ರಕಾರ ಸುಧಾರಣೆಗೆ ಸಾಕಷ್ಟು ಅವಕಾಶ ಕೊಟ್ಟಿದ್ದರೂ ಸುಧಾರಿಸದೆ ಮತ್ತು ರಾಜರನ್ನೇ ಜಾತಿಯ ಹೆಸರಿನಲ್ಲಿ ಅಪಮಾನಿಸಿದ ಪಂಡಿತನಿಗೆ ಕೆಲಸದಿಂದ ವಜಾ ಆಯಿತು. ಲೆಕ್ಕಕ್ಕೆ ಸೆರೆಮನೆಗೆ ಕಳುಹಿಸಬೇಕಿತ್ತು. ಆದರೆ ಮಹಾರಾಜರು ತಮ್ಮ ಅಪಾರ ಅನುಕಂಪದ ಮೇರೆಗೆ ಇಂತಹ ಕ್ರಮ ಕೈಗೊಳ್ಳಲಿಲ್ಲ.
ಬ್ರಹ್ಮಾಂಡ ಅಸಂತುಷ್ಟಿಯ ಜನಕ
ಆಗ ಶುರುವಾಯಿತು ನೋಡಿ ಬ್ರಾಹ್ಮಣರ ಮುಕ್ತ ವಿದ್ರೋಹ!
ಮುಕ್ತ ವಿದ್ರೋಹಕ್ಕೆ ಕಿಚ್ಚು ಹಚ್ಚಿದ್ದು ತಿಲಕರು ಕೇಸರಿಯಲ್ಲಿ 26ನೆ ಅಕ್ಟೋಬರ್ 1902 ಮತ್ತು 30ನೆ ಅಕ್ಟೋಬರ್ 1902ರಲ್ಲಿ ಬರೆದ ‘ವೇದೋಕ್ತ ಮತ್ತು ಮರಾಠಿಗರ ಕರ್ಮ’ವೆಂಬ ಒಕ್ಕಣೆಯ ಸರಣಿ ಸಂಪಾದಕೀಯ ಲೇಖನಗಳು. ಈ ಸಂಪಾದಕೀಯಗಳಲ್ಲಿ ತಿಲಕರು ಹೇಳುತ್ತಾರೆ: ‘‘ಆಂಗ್ಲ ಶಿಕ್ಷಣದ ಪ್ರಭಾವದಿಂದ ಈ ಮರಾಠರ ತಲೆಗಳೆಲ್ಲ ಕೆಟ್ಟು ಹೋಗಿವೆ. ಈ ವೇದೋಕ್ತ ಮಂತ್ರಗಳು ಅಬ್ರಾಹ್ಮಣರ ಸಮಕ್ಷಮದಲ್ಲಿ ಉಚ್ಚರಿಸುವುದು ಅಕ್ಷಮ್ಯ ಅಪರಾಧ. ಶಿವಾಜಿ ಮಹಾರಾಜ ಗೋ-ಬ್ರಾಹ್ಮಣರ ಸೇವೆ ಮಾಡಿದಕ್ಕೋಸ್ಕರ ರಿಯಾಯತಿ ತೋರಿಸಿ ಬ್ರಾಹ್ಮಣರು ಮಂತ್ರೋಚ್ಚಾರ ಮಾಡಿದ್ದ ಮಾತ್ರಕ್ಕೆ ಇವರ ಜಾತಿ ಹೋಗುತ್ತದೆಯೇ? ಇನ್ನು ಬ್ರಾಹ್ಮಣರು ಶಿವಾಜಿಗೆ ಮಾಡಿದ ಉಪಕಾರವೇನು ಕಡಿಮೆಯೇ? ಶೂದ್ರನಾದ ಶಿವಾಜಿಗೆ ಬ್ರಾಹ್ಮಣರು ‘ಛತ್ರಪತಿ’ ಎಂದು ಪಟ್ಟ ಕಟ್ಟಿ ಕ್ಷತ್ರಿಯ ಪದವಿ ಕೊಡಿಸಿದರು. ಆದರೆ ಈಗಿನ ತಲೆ ತಿರುಗಿದ ಮರಾಠರು ಈ ಉಪಕಾರಕ್ಕೆಲ್ಲ ಅಪಾತ್ರರು’’.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ತಿಲಕರು ಈ ಲೇಖನ ಬರೆದಾಗ ರಾಜ್ಯೋಪಾಧ್ಯಾಯ ವಜಾ ಆಗಿರಲಿಲ್ಲ. ಕೇವಲ ನೋಟಿಸು ಕೊಡಲಾಗಿತ್ತು. ಹೀಗಿದ್ದೂ ತಿಲಕರು ಶಿವಾಜಿಯ ವಂಶದವರನ್ನು ಮತ್ತು ಮಹಾರಾಜರನ್ನು ತಲೆ ಕೆಟ್ಟವರು ಎಂದು ಸಂಪಾದಕೀಯ ಬರೆದು ಸಮಾಜದಲ್ಲಿ ಒಡಕು ಮೂಡಿಸಿದರು. ಈಗ ಹೇಳಿ ಯಾರು ಭಾರತದಲ್ಲಿ ಜಾತಿವಾದದ ಬೀಜ ನೆಟ್ಟಿದ್ದು?
ನೀವು ನಂಬಲಿಕ್ಕಿಲ್ಲ, ಈ ಪ್ರತಿಭಟನೆಯ ಕಾವು ಎಲ್ಲಿಯವರೆಗೂ ಇತ್ತೆಂದರೆ, ಶಾಹು ಮಹಾರಾಜರಿಗೆ ಕೊಲೆ ಬೆದರಿಕೆಗಳು ಬರತೊಡಗಿದವು!
ಬ್ರಿಟಿಷರ ಚಾಡಿ ಸೇವೆ
ತಿಲಕರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಅಂದಿನ ಮುಂಬೈ ಪ್ರಾಂತದ ಗವರ್ನರ್ ಆಗಿದ್ದ ಹೆನ್ರಿ ನಾರ್ತ್ಕೊಟ್‌ಗೆ ಒಂದು ಟೆಲಿಗ್ರಾಂ ಕಳುಹಿಸಿ ಶಾಹು ಮಹಾರಾಜರು ಮಾಡಿದ ‘ಅನ್ಯಾಯ’ (ಬ್ರಾಹ್ಮಣನ ವಜಾ)ದ ಬಗ್ಗೆ ಚಾಡಿ ಚುಚ್ಚುತ್ತಾರೆ. ಇದಕ್ಕೆ ಮೊದಲು ಕೊಲ್ಹಾಪುರದ ಕರ್ನಲ್ ಆಗಿದ್ದ ಫೆರ್ರಿಸ್‌ಗೆ ಈ ವಜಾ ಪಂಡಿತನ ಹೆಸರಲ್ಲಿ ಒಂದು ಅರ್ಜಿ ಕಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಅರ್ಜಿಯನ್ನು ಕೊಲ್ಹಾಪುರದ ಕರ್ನಲ್ ಸೀದಾ ಕಸದ ಬುಟ್ಟಿಗೆ ರವಾನಿಸುತ್ತಾರೆ. ಅದರೂ ಛಲ ಬಿಡದ ತ್ರಿವಿಕ್ರಮರು ಬೊಂಬಾಯಿ ಗವರ್ನರ್‌ವರೆಗೂ ಹೋಗುತ್ತಾರೆ! ಆಗ ಹೊಸ ಗವರ್ನರ್ ಜೇಮ್ಸ್ ಮೊಂಟಿಥ್ ಕೂಡ 19 ಫೆಬ್ರವರಿ 1903ರಂದು ಅರ್ಜಿ ತಿರಸ್ಕರಿಸುತ್ತಾರೆ.
ಆದರೂ ಸ್ವರಾಜ್ಯ ಸಾಧನೆಯ ದೇಶಭಕ್ತರ ಸಿಟ್ಟು ತಣಿಯಲಿಲ್ಲ!
1905ರಲ್ಲಿ ಒಟ್ಟು ಮೂರು ಅರ್ಜಿಗಳನ್ನು ಬ್ರಿಟಿಷ್ ಪ್ರಭುತ್ವದ ಪರಮೋಚ್ಚ ಅಧಿಕಾರಿ ಲಾರ್ಡ್ ಕರ್ಜನ್‌ಗೆ ಕಳುಹಿಸುತ್ತಾರೆ. ಅಲ್ಲೂ 5 ಜನವರಿ 1905ರಲ್ಲಿ ಕ.ಬು. ಸೇವೆಯಾದ ಮೇಲೆ ತಿಲಕರಿಗೆ ಅಭಾವ ವೈರಾಗ್ಯ ಬಂದು ಕೊನೆಗೆ ಅವರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರವೇ ಬ್ರಾಹ್ಮಣರು ಬೇರೆ ಗತ್ಯಂತರವಿಲ್ಲದೆ ಮಹಾರಾಜರ ಪಟ್ಟಾಭಿಷೇಕ ಮಾಡಲು 1905 ರಲ್ಲಿ ಅಣಿಯಾದರು. ಮಹಾರಾಜರು ಎಲ್ಲವನ್ನೂ ಕ್ಷಮಿಸಿ ಹೊಸ ಅಧ್ಯಾಯ ಬರೆಯಲು ತಯಾರಾದರು.
ಇಂದು ಇಂದಿಗೆ ನಾಳೆ ನಾಳೆಗೆ -ತ್ರಿಕಾಲ ಜ್ಞಾನಿ ತಿಲಕರು
ಆಗ ಮಹಾರಾಜರ ಆಸ್ಥಾನದಲ್ಲಿ ಒಬ್ಬ ಚತುರ ಅಧಿಕಾರಿ ಮತ್ತು ಸತ್ಯಶೋಧಕ ಸಮಾಜದ ನೇತಾರ ಭಾಸ್ಕರ ಜಾಧವರು ಈ ದೇಶದ ಶೂದ್ರ ಮತ್ತು ದಲಿತರ ಪರವಾಗಿ ಬ್ರಾಹ್ಮಣರ ಪರ ಕ್ರಾಂತಿಯ ಕಹಳೆ ಊದುತ್ತಿದ್ದ ರೂವಾರಿ ತಿಲಕರಿಗೆ ಒಂದು ಪ್ರಶ್ನೆ ಕೇಳಿದರು: ‘‘ದೇಶದ ಅಂತಿಮ ಅಧಿಕಾರಿಯ ತೀರ್ಪು ಬಂದ ಮೇಲೆ ಮಹಾರಾಜರನ್ನು ಕ್ಷತ್ರಿಯರು ಎಂದು ಒಪ್ಪಿಕೊಳ್ಳುವುದರಲ್ಲಿ ಯಾರಿಗೂ ತಕರಾರು ಇರಲು ಸಾಧ್ಯವೇ ಇಲ್ಲ. ಶಾಹು ಮಹಾರಾಜರು ಕ್ಷತ್ರಿಯರು ಎಂದ ಮೇಲೆ ಮಹಾರಾಜರ ಸಹೋದರ ಬಾಪುಸಾಹೇಬ್ ಮಹಾರಾಜರನ್ನು ಕ್ಷತ್ರಿಯ ಎಂದು ನೀವು ಪರಿಗಣಿಸುತ್ತೀರಿ ತಾನೆ?’’ ಎಂದು.
ಆಗ ಕೇಸರಿ ಪತ್ರಿಕೆಯ ತಮ್ಮ ಅಗ್ರ ಲೇಖನದಲ್ಲಿ ಮತ್ತೊಮ್ಮೆ ಬ್ರಹ್ಮ ಸಿಂಹ ತಿಲಕರು ಗುಡುಗಿದರು: ‘‘ಮಹಾರಾಜರ ಸಹೋದರ ಬಾಪುಸಾಹೇಬ್ ಎಂದಿಗೂ ಶೂದ್ರನೆ! ಮಹಾರಾಜರನ್ನು ನಾವು ಕ್ಷತ್ರಿಯ ಎಂದು ಒಪ್ಪಿಕೊಂಡಿರುವುದು ಸದ್ಯ ಅವರ ಪಟ್ಟಾಭಿಷೇಕ ನಡೆಯುತ್ತಿರುವ ಕಾರಣಕ್ಕಾಗಿ’’
ಆಗ ಜಾಧವ್ ಒಂದು ಸರಳ ಪ್ರಶ್ನೆ ಕೇಳಿದರು ‘‘ಸ್ವಾಮಿ ಲೋಕಮಾನ್ಯರೇ, ದೇಶ ಆಳುವವನು ಕ್ಷತ್ರಿಯ ಎಂದಾದರೆ, ನೂರಾರು ವರ್ಷ ನಮ್ಮ ದೇಶವನ್ನಾಳಿದ ಮುಸಲ್ಮಾನರು ಕ್ಷತ್ರಿಯರು ಎಂದು ನೀವು ಒಪ್ಪಿಕೊಳ್ಳುತ್ತೀರಾ? ಹಾಗೆಯೇ ಮುಂದೆ ಒಂದು ದಿನ ಒಬ್ಬ ಮುಸಲ್ಮಾನನಿಗೆ ಪಟ್ಟಾಭಿಷೇಕವಾದರೆ ಅವನೂ ನಿಮ್ಮ ಪ್ರಕಾರ ಕ್ಷತ್ರಿಯನೇ. ಆದರೆ ಬಾಪು ಸಾಹೇಬ್ ಮಹಾರಾಜ ಮಾತ್ರ ಕ್ಷತ್ರಿಯರಲ್ಲ, ಅಲ್ಲವೇ?’’
ಆಗ ತ್ರಿಕಾಲ ಜ್ಞಾನಿ ತಿಲಕರು ಹೇಳುತ್ತಾರೆ: ‘‘ಹಿಂದಿನದು ಮುಗಿದ ಕಥೆ. ಅದನ್ನು ನೀವು ಅಂದು ಇದ್ದ ಬ್ರಾಹ್ಮಣರನ್ನು ಕೇಳಿ. ಮುಂದೆ ಎಂದಾದರು ಅಂತಹ ಸಂದರ್ಭ ಬಂದರೆ ಆಗಿನ ಬ್ರಾಹ್ಮಣರು ಆಗ ಉತ್ತರ ನೀಡುತ್ತಾರೆ. ನಾವು ಇಂದಿನ ಪ್ರಶ್ನೆಗೆ ಮಾತ್ರ ಉತ್ತರಿಸಿದ್ದೇವೆ’’
ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಎಂದಿಗೂ ಅಸ್ಪಶ್ಯತೆ ಬಗ್ಗೆ ಚರ್ಚಿಸಲು ತಿಲಕರು ಅವಕಾಶ ಮಾಡಿಕೊಡಲಿಲ್ಲ. ಸಾಮಾಜಿಕ ಪರಿವರ್ತನೆ ಪ್ರಶ್ನೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ ತ್ಯಾಗ ಮಾಡಿದ ಶ್ರೇಯ ತಿಲಕರಿಗೆ ಸಲ್ಲಬೇಕು. ಇಂತಹ ಮಹಾಪುರುಷರ ಸಾರಥ್ಯದ ಕಾಂಗ್ರೆಸ್ ಒಂದು ಪಕ್ಕಾ ಅಗ್ರಹಾರವಾಗಿತ್ತು. ತಿಲಕರ ಕಲ್ಪನೆಯ ಸ್ವರಾಜ್ಯ ಕೇವಲ ಸವರ್ಣೀಯ ಹಿಂದೂಗಳ, ಅದರಲ್ಲೂ ವೈದಿಕರ ಸ್ವರಾಜ್ಯವಾಗಿತ್ತು. ಅದರಲ್ಲಿ ದಲಿತ ಶೂದ್ರರಿಗೆ ಸವರ್ಣೀಯರ ಸೇವೆಯೇ ಮುಕ್ತಿಯಾಗಿತ್ತು.

ತಂದೆಗೆ ‘ತಕ್ಕನಲ್ಲದ’ ಮಗ
ಒಂದು ಕೊನೆಯ ಮಾತು. ತಿಲಕರ ಮಗ ಶ್ರೀಧರ ತಿಲಕ್ ತಮ್ಮ ತಂದೆಯ ಹಾದಿ ಹಿಡಿಯಲಿಲ್ಲ. ಅವರು ಬಾಬಾ ಸಾಹೇಬರನ್ನು ತಮ್ಮ ಸ್ವಂತ ಸೋದರನಂತೆ ಕಂಡರು. ಬಾಬಾ ಸಾಹೇಬರನ್ನು ದಲಿತರೇ ಸಂಪೂರ್ಣವಾಗಿ ಒಪ್ಪಿಕೊಂಡು ಸಾಮಾಜಿಕ ಚಳವಳಿಗೆ ಬರದಿದ್ದ ದಿನಗಳಲ್ಲಿ ಪುಣೆಯ ಸಂಪ್ರದಾಯಸ್ಥರ ವಿರೋಧ ಕಟ್ಟಿಕೊಂಡು ಶ್ರೀಧರ ತಿಲಕರು ಅಂಬೇಡ್ಕರ್ ಜೊತೆ ಗುರುತಿಸಿ ಕೊಂಡರು.





ಶ್ರೀಧರ ತಿಲಕ ಒಬ್ಬ ಅಪ್ಪಟ ಸಾಮಾಜಿಕ ಸಮಾನತೆಯ ಕಾಳಜಿ ಇದ್ದ ವ್ಯಕ್ತಿಯಾಗಿದ್ದರು. ಬಾಬಾ ಸಾಹೇಬರು ಸಮತಾ ಸೈನಿಕ ದಳವನ್ನು ಪ್ರಾರಂಭಿಸಲು ತಮ್ಮ ಸ್ವಂತ ಮನೆ ‘ತಿಲಕ ವಾಡಾ’ವನ್ನು ಈ ಶ್ರೀಧರ ತಿಲಕರು ಧಾರೆ ಎರೆದು ಅಂಬೇಡ್ಕರ್‌ರಿಗೆ ಕೊಟ್ಟರು.
ವೈಯಕ್ತಿಕ ಕಾರಣಗಳಿಂದ ಶ್ರೀಧರ ತಿಲಕ್ ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಆತ್ಮಹತ್ಯೆಯ ಚೀಟಿಯ ಒಂದು ಪ್ರತಿಯನ್ನು ಪುಣೆಯ ಜಿಲ್ಲಾಧಿಕಾರಿಗೆ ಕಳಿಸಿದ್ದರೆ ಇನ್ನೊಂದು ಪ್ರತಿಯನ್ನು ಶ್ರೀಧರ ತಿಲಕರು ಬಾಬಾ ಸಾಹೇಬರಿಗೆ ಕಳುಹಿಸಿ ಕೊಡುತ್ತಾರೆ. ತಿಲಕರ ಸಂಕುಚಿತತೆ ಮತ್ತು ಅವರ ಮಗನ ಉದಾತ್ತತೆ -ಎರಡನ್ನೂ ಇಂದು ಚರಿತ್ರೆ ಮರೆತು ಬಿಟ್ಟಿದೆ.
ಶೌರಿ ಶೌರ್ಯ: ಶಾಹು ಮಹಾರಾಜರನ್ನೇ ಕೋರ್ಟ್ ಕಚೇರಿಗೆ ಅಲೆಯಿಸಿದ ಬ್ರಹ್ಮ ಶಕ್ತಿ ಮತ್ತು ದೇಶ ಭಕ್ತಿ ಶಕ್ತಿ ಎಷ್ಟಿದ್ದೀತು ಲೆಕ್ಕ ಹಾಕಿ. ತಿಲಕರ ಬ್ರಿಟಿಷ್ ವಿರೋಧಕ್ಕೆ ಪ್ರಮುಖ ಕಾರಣ ಬ್ರಿಟಿಷರು ಸಾಮಾಜಿಕ ಸಮಾನತೆಗೆ ಒತ್ತು ಕೊಟ್ಟಿದ್ದೂ ಆಗಿತ್ತು.
ಅಂಬೇಡ್ಕರ್‌ರನ್ನು ಬ್ರಿಟಿಷರ ಏಜೆಂಟ್ ಎಂದು ನಿಂದಿಸುವ ಶೌರಿ ತಿಲಕರ ಬಗ್ಗೆ ಏನನ್ನೂ ಹೇಳುವುದಿಲ್ಲ. ಅದಕ್ಕಿಂತ ಹೆಚ್ಚಿನ ಸಂಕಟವಾಗುವುದು ಇತರ ತಥಾಕಥಿತ ಎಡ ಮತ್ತು ಪ್ರಗತಿಪರ ಇತಿಹಾಸಕಾರರೂ ತಿಲಕರ ಇನ್ನೊಂದು ಮುಖದ ಬಗ್ಗೆ ಮಾತನಾಡುವುದಿಲ್ಲ. ತಿಲಕರ ಮಹಿಳಾ ವಿರೋಧಿ ನಿಲುವುಗಳ ಬಗ್ಗೆ ಸ್ವತಃ ಒಬ್ಬ ಮಹಿಳೆ ಮತ್ತು ಅಭೂತಪೂರ್ವ ಇತಿಹಾಸಜ್ಞೆ ರೋಮಿಲ ಥಾಪರ್ ಬರೆಯಬೇಕಿತ್ತು. ತಾಯಿ ಸಾವಿತ್ರಿಯನ್ನೇ ಮರೆತ ನಾವು ತಿಲಕರ ಪೂಜೆ ಮಾಡುವುದರಲ್ಲಿ ವಿಶೇಷವೆನಿಲ್ಲ. ಆದರೆ ಡಾ.ಪರಿಮಳಾ ರಾವ್ ಎಂಬ ಯುವ ಚಿಂತಕಿ "Tilak`s Approach to Women`s Education and Emancipation’ಎಂಬ ಅದ್ಭುತ ಪುಸ್ತಕ ಬರೆದು ತಿಲಕರ ನೈಜ ‘ಸಾಮಾಜಿಕ’ ನಿಲುಮೆಗಳನ್ನು ಸಾಕ್ಷಿ ಸಮೇತ ಹೊರಹಾಕಿದ್ದಾರೆ.
ಒಟ್ಟಿನಲ್ಲಿ, ದಲಿತ ಬಹುಜನರ ತಟ್ಟೆಯಲ್ಲಿ ನೊಣ ಹಾಕಿ ಅನ್ನ ಕಸಿಯುವ ಶೌರಿಗಳು ತಮ್ಮ ತಟ್ಟೆಯಲ್ಲಿ ದೊಡ್ಡದೇನೋ ಬಿದ್ದಿರುವುದನ್ನು ನೋಡಿಕೊಂಡು ಎತ್ತಿ ಪಕ್ಕಕ್ಕಿಟ್ಟರೆ ದೇಶಕ್ಕೆ ಮಹದುಪಕಾರವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor