ಎದುರಾಳಿಗಳ ಗುಣ ಮೆಚ್ಚಲ್ಪಡಲು ಕಾರಣ...?

Update: 2015-10-17 05:55 GMT
ತಮ್ಮ ಎದುರಾಳಿಗಳಾದರೂ ಸರಿ ಅವರಲ್ಲಿರುವ ಗುಣಗಳನ್ನು ಗುರುತಿಸುವುದಕ್ಕೆ ಘನ ಸಂಸ್ಕಾರ ಬೇಕು. ಅಂತಹ ಸಂಸ್ಕಾರ ಬಿಜೆಪಿಯಲ್ಲೀಗ ತುಂಬಿ ತುಳುಕುತ್ತಿದೆ.! ಇಲ್ಲದಿದ್ದರೆ ಕಾಂಗ್ರೆಸ್ಸಿಗರಾದ ಪಟೇಲ್-ಶಾಸ್ತ್ರಿಯವರನ್ನು, ಜನ ಸಂಘದ ಜೊತೆ ಯಾವುದೇ ನೇರ ಸಂಪರ್ಕವಿರದ ಸುಭಾಶ್ಚಂದ್ರ ಬೋಸರನ್ನು ಹಾಗೂ ಇತ್ತೀಚಿನ ದಶಕಗಳಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‌ರನ್ನು ಹಾಡಿ ಹೊಗಳುತ್ತಿದ್ದರೇ? ಪಟೇಲರ ಬೃಹತ್ ಪ್ರತಿಮೆ ಸ್ಥಾಪಿಸುತ್ತಿದ್ದರೇ? ಬೋಸ್-ಶಾಸ್ತ್ರಿಗಳ ಸಾವಿನಲ್ಲೇನೋ ರಹಸ್ಯ ಹುದುಗಿದೆ ಎಂದು ಶಂಕಿಸಿ ಗತವನ್ನು ಕೆದಕುತ್ತಿದ್ದರೇ? ಪಿವಿಎನ್‌ರ ಆರ್ಥಿಕ ನೀತಿಗಳನ್ನು ಮೆಚ್ಚಿಕೊಳ್ಳುತ್ತಿದ್ದರೇ?
ಹಾಗೆ ನೋಡಿದರೆ ನೆಹರೂ-ಇಂದಿರಾ ಬಿಜೆಪಿ ಮತ್ತು ಸಂಘಿಗಳಿಗೆ ಬೆನ್ನೆಲುಬಾದ ಬ್ರಾಹ್ಮಣ್ಯದಲ್ಲಿ ಹುಟ್ಟಿದವರು. ಗಾಂಧಿ ಅವರ ಫೇವರಿಟ್ ಬನಿಯಾ ಜಾತಿಯವರು. ಅವರ ಮೇಲೆ ದ್ವೇಷವೇಕೆ? ನೆಹರೂ-ಇಂದಿರಾರಲ್ಲಿ ಜಾತೀಯತೆ ಸೊನ್ನೆಯಾ ಗಿತ್ತು. ಅವರು ಧರ್ಮ ಎಂದರೆ ಮಾನವಧರ್ಮ ಎಂದು ನಂಬಿದವರು. ನೆಹರೂ ಸಮಾಜವಾದದಲ್ಲಿ ನಂಬಿಕೆ ಇಟ್ಟವರು. ಇಂದಿರಾ ಬ್ಯಾಂಕ್‌ಗಳ ರಾಷ್ಟ್ರೀಕರಣ, ರಾಜಧನ ರದ್ದತಿಯಂಥ ಕ್ರಮಗಳನ್ನು ಕೈಗೊಂಡವರು. ಬಿಜೆಪಿ-ಸಂಘಿಗಳು ಬಯಸುವಂಥ ಅನ್ಯಧರ್ಮ ದ್ವೇಷ ನೆಹರೂ ಕುಟುಂಬದಲ್ಲಿ ಕಾಣಸಿಗದು. ಗಾಂಧಿಯವರು ರಾಮಾಯಣ, ಭಗವದ್ಗೀತೆ, ಗೋವು, ಸಸ್ಯಾಹಾರ ಎನ್ನುವವರೆಗೂ ಅವರನ್ನು ಓಲೈಸಿದ ಹಿಂದುತ್ವವಾದಿಗಳು ಯಾವಾಗ ಗಾಂಧಿ ಪ್ರೀತಿಯ ಪ್ರವಾಹ ಧರ್ಮದ ಗಡಿ ದಾಟಿ ಹರಿಯ ತೊಡಗಿತೋ ಆಗ ಸಿಡಿದೆದ್ದು ಅವರನ್ನು ಔರಂಗಝೇಬರ ಪುನರಾವತಾರ ಎಂದು ಕರೆಯುವ ಮಟ್ಟಕ್ಕೂ ಹೋದರು. ವಿಭಜನೆ ಪಾಪವನ್ನು ತಲೆಗೆ ಕಟ್ಟಿ ಅವರನ್ನು ಉಡಾಯಿಸಿದ ಪುಣ್ಯ ಯಾರದ್ದು ಎಂದು ಹೊಸದಾಗಿ ಹೇಳಬೇಕಾಗಿಲ್ಲ.
 ಪುರುಷ ಫ್ಯಾಸಿಸ್ಟರನ್ನು ಮುಗಿಲಿಗೆತ್ತುವ ಸಂಘ ಪರಿವಾರಕ್ಕೆ ಮಹಿಳೆಯಲ್ಲೂ ಅಂಥ ಗುಣವಿದ್ದರೆ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಇಂದಿರಾರನ್ನು ದುರ್ಗೆ, ಸಿಂಹಿಣಿ ಎಂದು ಹೊಗಳಿದರೂ ಈ ಮಹಿಳಾ ವಿರೋಧಿಗಳು ಅವರನ್ನು ಮೂಲೆಗುಂಪು ಮಾಡಲು ಹಾತೊರೆದರು. ದುರದೃಷ್ಟವಶಾತ್ ಎಮರ್ಜನ್ಸಿ ಘೋಷಿಸಿ ಇಂದಿರಾ ಜಾತ್ಯತೀತ ಭಾರತವನ್ನು ಹಂತಕರ ಕೈಗೆ ಕತ್ತರಿಸಲು ಕೊಟ್ಟಂತಾಯಿತು.
ಇದ್ದಕ್ಕಿದ್ದಂತೆ ಗುಜರಾತಿಗೆ ಸೀಮಿತವಾಗಿದ್ದ ಸರ್ದಾರ್ ಪಟೇಲ್ ಮೇಲಿನ ಕ್ರೇಜ್ ಸರ್ವವ್ಯಾಪಿಯಾಗ ತೊಡಗಿದೆ. ತಮ್ಮ ಸಂಘಟನೆಯನ್ನು ನಿಷೇಧಿಸಿದ್ದ ಪಟೇಲರ ಜಪವನ್ನು ಆರೆಸ್ಸೆಸ್ ಏಕೆ ಮಾಡುತ್ತಿದೆ ಎಂದರೆ ಪಟೇಲ್ ಮಾಡಿದ್ದು ಕಣ್ಣೊರೆಸುವ ತಂತ್ರವೇ ಹೊರತು ಅವರಿಗೆ ಆರೆಸ್ಸೆಸ್ ಮೇಲೆ ಸಿಟ್ಟಿರಲಿಲ್ಲ. ಅಂಬೇಡ್ಕರರು ಚುನಾವಣೆ ಗೆಲ್ಲದಂತೆ ಪಿತೂರಿ ಮಾಡಿದ ಪಟೇಲರು, ಹೈದರಾಬಾದ್ ನಿಝಾಮನನ್ನು ದಮನಿಸುವ ನೆಪದಲ್ಲಿ ತೆಲಂಗಾಣದಲ್ಲಿ ಗರಿ ಬಿಚ್ಚುತ್ತಿದ್ದ ಭೂಮಾಲಕ ವಿರೋಧಿ ಚಳವಳಿಯನ್ನು ಸೈನ್ಯದ ಮೂಲಕ ದಮನಿಸಿದ್ದರು. ವರ್ಣಾಶ್ರಮ ನೀತಿಯ ಆರಾಧಕರಾಗಿದ್ದ ಪಟೇಲ್ ಭಾರತದ ಪ್ರಥಮ ಪ್ರಧಾನಿಯಾಗಬೇಕಾಗಿತ್ತು ಎಂದು ಸಂಘ ಪರಿವಾರ ಹಳಹಳಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಬೋಸರಂತೂ ಸಂಘಿಗಳ ಆರಾಧ್ಯದೈವ. ಹಿಟ್ಲರ್ ಜೊತೆ ಸೇರಿಕೊಂಡು ಹಿಟ್ಲರ್‌ಶಾಹಿ ಮೈಗೂಡಿಸಿಕೊಂಡಿದ್ದರು. ಪ್ರಜಾಪ್ರಭುತ್ವ, ಸಂವಿಧಾನ, ಭಾವೈಕ್ಯಗಳಿಗೆ ಬೆಲೆ ಕೊಡದವರು. ಪಿವಿಎನ್‌ರಂತೂ ಸಬ್ಸಿಡಿಗಳನ್ನು ನಿಲ್ಲಿಸಿ ಕಾರ್ಮಿಕರು, ರೈತರು, ಕೆಳವರ್ಗಗಳು ಉಸಿರುಗಟ್ಟಿ ಒದ್ದಾಡಿ ಸಾಯುವಂಥ ವಾತಾವರಣ ನಿರ್ಮಿಸಿದ್ದರು. ಬಾಬರಿ ಮಸೀದಿ ಬೀಳಿಸಲು ಸಹಕರಿಸಿದ ಈ ಮಹಾನುಭಾವರು ಅದೆಷ್ಟು ಸಾಧು ಸಂತರ ಕಾಲುಗಳಿಗೆ ಬಿದ್ದಿದ್ದರೋ ಲೆಕ್ಕವಿಲ್ಲ. ಶಾಸ್ತ್ರಿ ಪ್ರಾಮಾಣಿಕರು, ಸರಳರು. ಆದರೆ ನೆಹರೂರಷ್ಟು ಜಾತಿಧರ್ಮಗಳಿಗೆ ಅತೀತರಾಗಿರಲಿಲ್ಲ. ಗಾಂಧಿಯವರ ಅಹಿಂಸಾವಾದವನ್ನು ಬೆಂಬಲಿಸಿದವರಲ್ಲ.
ಹಿಂದುತ್ವವಾದಿಗಳೊಂದಿಗೆ ಇವರನ್ನು ಕೂಡಿಸಿರುವ ಎಳೆಗಳು ಹಲವಾರಿವೆ. ಹಿಂದುತ್ವ ಎಂಬುದು ಅಹಿಂಸೆ, ಭಾವೈಕ್ಯ, ಆರ್ಥಿಕ-ಸಾಮಾಜಿಕ ಸಮಾನತೆ, ವೌಢ್ಯ-ಕಂದಾಚಾರಗಳಿಗೆ ವಿರೋಧ, ಸ್ತ್ರೀ-ದಲಿತ ಸಬಲೀಕರಣ, ಮಿಶ್ರ ಸಂಸ್ಕೃತಿ ಇಂಥ ಯಾವುದೇ ಜೀವಪರ ವೌಲ್ಯಗಳನ್ನು, ಅದರ ಪ್ರತಿಪಾದಕರನ್ನು ದ್ವೇಷಿಸುತ್ತದೆ. ಹಿಂಸೆ, ಸರ್ವಾಧಿಕಾರ, ರಾಜಪ್ರಭುತ್ವ, ಸ್ತ್ರೀಯರ ದಾಸ್ಯ, ದಲಿತರ ದಮನ, ವರ್ಣಭೇದ ನೀತಿ, ಮುಸ್ಲಿಮ್-ಕ್ರೈಸ್ತರ ಮೇಲೆ ಅಸಹನೆ, ಭೂ ಮಾಲಕರ ಬಂಡವಾಳಶಾಹಿ ಪರ ಆಡಳಿತ ಇವೆಲ್ಲಾ ಮತಾಂಧರಿಗೆ ಅಚ್ಚುಮೆಚ್ಚಿನ ಕಾರ್ಯಸೂಚಿಗಳು. ಹಿಟ್ಲರ್‌ನಷ್ಟು ಕ್ರೌರ್ಯವಿಲ್ಲದಿದ್ದರೂ ಬೋಸ್, ಪಟೇಲ್ ಮುಂತಾದವರು ಜೀವವಿರೋಧಿ-ಶ್ರಮಿಕ ವಿರೋಧಿ ಭಾವಗಳನ್ನು ಹೊಂದಿದ್ದವರೇ. ಹಾಗಾಗಿ ಅವರ ಸಾವು ನೋವುಗಳನ್ನು ಜಾತ್ಯತೀತರು, ಸಮಾನತಾವಾದಿಗಳಾದ ನೆಹರೂ-ಗಾಂಧಿ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ (ಇವರೆಲ್ಲರಿಗಿಂತ ‘ಕಡು ಕೇಸರಿ’ಯಾದ ತಿಲಕರೂ ಸದ್ಯದಲ್ಲೇ ಗೋರಿಯಿಂದೆದ್ದು ಬರಲಿದ್ದಾರೆ ನೋಡುತ್ತಿರಿ!).
ಇವತ್ತು ಅಮೆರಿಕ ಎಂಬ ಕೊಲೆಪಾತಕ ದೇಶ ಡ್ರೋನ್ ಮೂಲಕ ಮುಸ್ಲಿಮ್ ದೇಶಗಳ ನೂರಾರು ಅಮಾಯಕರ ನೆತ್ತರು ಹರಿಸುತ್ತಿರುವುದು ತಿಳಿದೂ ತಿಳಿಯದಂತೆ ಸತ್ಯ ನಾದೆಳ್ಳ, ಸುಂದರ್ ಪಿಚೈಯಂಥವರು ಅಲ್ಲಿ ಸ್ವರತಿಯಲ್ಲಿ ಮುಳುಗಿ ತೇಲುತ್ತಾ ಮೋದಿ ಮಾತಿಗೆ ಚಪ್ಪಾಳೆ ಹೊಡೆಯುತ್ತಿದ್ದಾರೆ. ಭಾರತದಲ್ಲೂ ಇಂಥ ಪ್ರತಿಭಾವಂತ ವರ್ಗ ನರಹಂತಕರ ಬೆಂಬಲಕ್ಕೆ ನಿಂತಿದೆ. ವಿದ್ಯುನ್ಮಾನ (ಗೇಡಿ) ಮಾಧ್ಯಮಗಳು ಅವರಿಗೆ ನಡೆಮುಡಿ ಹಾಸುತ್ತಿವೆ.
ವಿಚಾರವಾದಿಗಳು, ಪ್ರೊಫೆಸರ್, ವಕೀಲರು, ಪಿಎಚ್‌ಡಿಗಳ ವರ್ತುಲದಿಂದ ಹೊರಬಂದು ಅಮಾಯಕ ಜನಸಾಮಾನ್ಯರಲ್ಲಿ ಬಿತ್ತಲ್ಪಟ್ಟಿರುವ ಹಿಂದುತ್ವದ ಭ್ರಾಂತಿಗಳನ್ನು ಕಳೆದು ಜಾಗೃತಿ ಮೂಡಿಸಬೇಕಾಗಿದೆ. ಇಲ್ಲದಿದ್ದರೆ ಮನೆಗೊಬ್ಬ ಮನು ಅವತರಿಸುವುದು ಖಂಡಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor