ರೆಡ್ಡಿ ಕಚೇರಿ, ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದ 6 ಜಿಲ್ಲೆಗಳಲ್ಲಿ 11 ಕಡೆ ವ್ಯಾಪಕ ತಪಾಸಣೆ
ಬೆಂಗಳೂರು, ಡಿ.29: ಭ್ರಷ್ಟಾಚಾರ ಆರೋಪ ದಿಂದ ಕಳೆಗುಂದಿದ್ದ ಲೋಕಾಯುಕ್ತ ಸಂಸ್ಥೆ ಮತ್ತೆ ಹಳಿಗೆ ಮರಳಿದ್ದು, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರ ಮನೆ ಮತ್ತು ಕಚೇರಿಗಳ ಮೇಲೆ ಇಂದು ದಾಳಿ ನಡೆಸಿದೆ. ಬೆಳಗ್ಗೆಯಿಂದಲೇ ಆರಂಭವಾದ ಈ ದಾಳಿಯಿಂದಾಗಿ ಭ್ರಷ್ಟರಲ್ಲಿ ನಡುಕ ಹುಟ್ಟಿದೆ.
ಭ್ರಷ್ಟಾಚಾರ ಕೂಪದಲ್ಲಿ ಸಿಲುಕಿದ ಕೆಲವು ಅಧಿಕಾರಿ ಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿ, ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ನ್ಯಾಯಮೂರ್ತಿ ಆನಂದ್ ಅವರನ್ನು ಉಪ ಲೋಕಾ ಯುಕ್ತರನ್ನಾಗಿ ನೇಮಿಸಿದ ನಂತರ ನಡೆದ ಮೊದಲ ದಾಳಿ ಇದಾಗಿದೆ. ಜನಾರ್ದನ ರೆಡ್ಡಿ ಅವರ ಬೆಂಗಳೂರು ಹಾಗೂ ಬಳ್ಳಾರಿಯ ನಿವಾಸಗಳು, ಗಣಿ ಕಂಪೆನಿ ಕಚೇರಿಗಳು ಸೇರಿದಂತೆ ರಾಜ್ಯದ ಹಲವಾರು ಕಡೆ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ಅವರ ನಿವಾಸ ಹಾಗೂ ಸಮಿಪದ ಒಎಂಸಿ ಗಣಿ ಕಂಪೆನಿ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಜಾಲಾಡಿದ್ದಾರೆ. ಬಳ್ಳಾರಿಯ ನಿವಾಸಕ್ಕೆ ಹಿಂಬಾಗಿಲಿನ ಮೂಲಕ ಪ್ರವೇಶಿಸಿ ಪರಿಶೀಲನೆ ನಡೆಸಿದ್ದು, ಈ ಸಂದರ್ದಲ್ಲಿ ಸಂಸದ ಶ್ರೀರಾಮುಲು ಹಾಜರಿದ್ದರು. ಅಷ್ಟೇ ಅಲ್ಲ ಪ್ರಸ್ತುತ ರೆಡ್ಡಿ ವಾಸವಿರುವ ನಗರದ ಪಾರಿಜಾತ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್ಪಿ ವೆಂಕಟ್ ಸ್ವಾಮಿ ನೇತೃತ್ವದಲ್ಲಿ 12ಕ್ಕೂ ಹೆಚ್ಚು ಮಂದಿ ಪೊಲೀಸರು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡರು. ಅಲ್ಲಿಯೇ ಇದ್ದ ಜನಾರ್ದನ ರೆಡ್ಡಿ ಅವರಿಂದ ಕೆಲವು ಮಾಹಿತಿ ಪಡೆದಿದ್ದಾರೆ. 2007ರಿಂದ 2011ರ ಅವಧಿಯಲ್ಲಿ 11 ಬೇನಾಮಿ ಕಂಪೆನಿಗಳನ್ನು ಸೃಷ್ಟಿಸಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ 362.73 ಕೋಟಿ ರೂ. ಹಣಗಳನ್ನು ಗಳಿಸಿದ್ದಾರೆ ಎನ್ನುವ ಕಾರಣಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬೀದರ್, ರಾಯಚೂರು, ವಿಜಯಪುರ, ಕಲಬುರಗಿ ಮತ್ತು ಕೋಲಾರಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸಿ ವಶ ಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಇನ್ನೂ ದಾಳಿ ಮುಂದುವರಿಸಿದ್ದಾರೆ.
ವಿಜಯಪುರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ಹನುಮಂತಪ್ಪ ಅವರ ಸಾರವಾಡ ಗ್ರಾಮದ ಮನೆ ಹಾಗೂ ಅವರ ಪಾಲುಗಾರಿಕೆಯ ಪ್ರಾರ್ಥನಾ ಶಾಲೆಯ ಮೇಲೆ ಲೋಕಾಯುಕ್ತ ಎಸ್‌ಪಿ ಪ್ರಭಾಕರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ರಾಯಚೂರು ಕೆಆರ್‌ಐಡಿಎಲ್ ಮುಖ್ಯ ಅಭಿಯಂತರ ಅಬ್ದುಲ್ ರಶೀದ್ ಅವರ ಸಿಂಧನೂರು ನಗರದಲ್ಲಿನ ಕಚೇರಿ ಹಾಗೂ ನಿಜಲಿಂಗಪ್ಪ ಕಾಲೋನಿಯ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರ ವಿರುದ್ಧ ಎಪ್‌ಐಆರ್ ದಾಖಲಿಸಿದ್ದಾರೆ. ಅಧಿಕಾರಿ ಮನೆಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಕೆಲವು ಸಮಯ ಕಾದು ಕುಳಿತ ಪ್ರಸಂಗವೂ ನಡೆಯಿತು.
ಬೀದರಿನ ಗ್ರಾಮೀಣ ನೈರ್ಮಲ್ಯ ನೀರು ಸರಬರಾಜು ಇಲಾಖೆಯ ಎಂಜಿನಿಯರ್ ರಾಜಶೇಖರ್ ಬ್ರಹ್ಮಾಪುರೆ ಅವರ ಚಿಟ್ಟೆ ಗ್ರಾಮದ ತೋಟದ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಹಮ್ಮದ್ ಅಝ್ಗರ್ ಅವರ ಆಪ್ತ ಸಹಾಯಕ ಸುಬ್ಬುರಾವ್ ಸುಬೇದಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನೆಡೆಸಿ ಆದಾಯ ಮೀರಿ ಆಸ್ತಿಗಳಿಕೆ ಹಿನ್ನೆಲೆಯಲ್ಲಿ ಮಹತ್ವದ ದಾಖಲೆಗಳು ಲೋಕಾಯುಕ್ತ ಅಧಿಕಾರಿಗಳ ಕೈ ಸೇರಿವೆ. ಕೋಲಾರದ ಜಿಲ್ಲಾ ಪಂಚಾಯತ್ ಜೂನಿಯರ್ ಎಂಜಿನಿಯರ್ ಪ್ರಸನ್ನಕುಮಾರ್ ಅವರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಬಂಗಾರಪೇಟೆ ಪಟ್ಟಣದ ನಿವಾಸ ಹಾಗೂ ಬೆಂಗಳೂರು ಆರ್.ಟಿ.ನಗರದ ಮನೆಯ ಮೇಲೆ ದಾಳಿ ಮಾಡಿ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
♦♦♦
ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳು
ಸುಬ್ಬರಾವ್ ಸುಬೇದಾರ್(ಕುಡಾ ಅಧ್ಯಕ್ಷರ ಆಪ್ತ ಸಹಾಯಕ)
ರಾಜಶೇಖರ್ ಶಂಭುರಾವ್ ಬ್ರಹ್ಮಾಪುರ (ಬೀದರ್ ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಿರಿಯ ಎಂಜಿನಿಯರ್)
ಅಬ್ದುಲ್ ರಶೀದ್ (ರಾಯಚೂರು ಕೆಆರ್‌ಐಡಿಎಲ್ ಮುಖ್ಯ ಎಂಜಿನಿಯರ್)
ಪ್ರಸನ್ನಕುಮಾರ್ (ಕೋಲಾರ ಜಿಲ್ಲಾ ಪಂಚಾಯತ್ ಎಂಜಿನಿಯರ್)
ಹನುಮಂತಪ್ಪ (ವಿಜಯಪುರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಿರಿಯ ಎಂಜಿನಿಯರ್).
♦♦♦
ಶ್ರೀರಾಮುಲು ಗರಂ
ದಾಳಿಯ ಬಳಿಕ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಶ್ರೀೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು ನಿರ್ನಾಮ ಮಾಡುತ್ತಿದ್ದಾರೆ. ಆದರೆ ಜನರ ಆಶೀರ್ವಾದ ನಮ್ಮ ಮೇಲಿದೆ. ಸಾಮರ್ಥ್ಯವಿದ್ದರೆ ಅಕ್ರಮ ಮರಳುಗಾರಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ಇದರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ಆಪ್ತರು ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.