70 ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ: ಸಚಿವ ಶಿವಕುಮಾರ್

Update: 2016-01-02 17:42 GMT

ಬೆಂಗಳೂರು, ಜ. 2: ಸಮರ್ಪಕ ವಿದ್ಯುತ್ ಪೂರೈಕೆ ದೃಷ್ಟಿಯಿಂದ ರಾಜ್ಯದಲ್ಲಿ ಹೊಸದಾಗಿ 70 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಯಲಹಂಕದಲ್ಲಿ ಕೆಪಿಟಿಸಿಎಲ್‌ನ 220 ಕೆವಿ ಉಪಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಶಿವಕುಮಾರ್, ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಆಧುನಿಕ ತಾಂತ್ರಿಕತೆಯನ್ನು ಬಳಸಿ ವಿದ್ಯುತ್ ಉಪ ಸ್ಥಾವರವನ್ನು ನಿರ್ಮಿಸಲಾಗಿದೆ ಎಂದರು.
ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸುಧಾರಿಸಲು ರಾಜ್ಯ ಸರಕಾರ ಒತ್ತು ನೀಡುತ್ತಿದ್ದು, ಈ ವರ್ಷ 70 ಉಪ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದ್ದೇವೆ ಎಂದ ಅವರು, ಸಮಸ್ಯೆಗಳ ಮಧ್ಯೆಯೇ ಇಂಧನ ಇಲಾಖೆ ಸಮರ್ಪಕ ನಿರ್ವಹಣೆಗೆ ರಾಜ್ಯಕ್ಕೆ ಪ್ರಶಸ್ತಿ ಸಂದಿದೆ ಎಂದರು.
ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಲು ದುಬಾರಿ ವೆಚ್ಚವಾಗಲಿದೆ ಎಂದು ಆತಂಕ ಸರಿಯಲ್ಲ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚಿನ ನೆರವು ನೀಡುತ್ತಿದ್ದು, ಸೌರಶಕ್ತಿ ಉತ್ಪಾದನೆಯಿಂದ ಹೆಚ್ಚಿನ ಲಾಭ ದೊರೆಯಲಿದೆ ಎಂದರು.
ಸುಮಾರು 33 ಕೋಟಿ ರೂ.ವೆಚ್ಚದಲ್ಲಿ 220 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗಿದೆ. ಆಧುನಿಕ ತಾಂತ್ರಿಕತೆ ಅಳವಡಿಕೆ ಹಿನ್ನೆಲೆಯಲ್ಲಿ ಯಲಹಂಕ, ರಾಜನಕುಂಟೆ, ಪುಟ್ಟೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿದ್ದ ವ್ಯತ್ಯಯ ತಪ್ಪಲಿದೆ ಎಂದು ಹೇಳಿದರು.
ವಿದ್ಯುತ್ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಂಡಿದ್ದು, ಇಂಧನ ಇಲಾಖೆಗೆ ಸುಮಾರು 66 ಕೋಟಿ ರೂ. ಲಾಭವಾಗಲಿದೆ. ವಾರ್ಷಿಕ 16 ಕೋಟಿ ರೂ.ಗೂ ಹೆಚ್ಚಿನ ವಿದ್ಯುತ್ ಉಳಿತಾಯವಾಗಲಿದೆ ಎಂದ ಅವರು, 39 ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News