ಬಂಟರ ಸಂಘದಿಂದ ‘ಕಡಲತಡಿಯ ಸಮಾಗಮ’ ಕಾರ್ಯಕ್ರಮ; ತುಳು ಅಧಿಕೃತ ಭಾಷೆಯನ್ನಾಗಿಸಲು ಒತ್ತಾಯ

Update: 2016-01-02 17:43 GMT

 ಬೆಂಗಳೂರು, ಜ.2: ಪ್ರಾಚೀನ ಇತಿಹಾಸ ಹೊಂದಿರುವ ‘ತುಳು’ ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆಂದು ಶಾಸಕಿ ಶಕುಂತಲಾ ಶೆಟ್ಟಿ ತಿಳಿಸಿದ್ದಾರೆ.
 ಬಂಟರ ಸಂಘವು ವಿಜಯನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಕಡಲತಡಿಯ ಸಮಾಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳುವನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಕರಾವಳಿ ಭಾಗದ ಸಚಿವರು, ಶಾಸಕರು ಮತ್ತು ಪರಿಷತ್ ಸದಸ್ಯರ ನಿಯೋಗ ರಚಿಸಿ, ಶೀಘ್ರವಾಗಿಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದೆಂದು ತಿಳಿಸಿದರು.
ಕರಾವಳಿಯ ಜನರು ಕೊಂಕಣಿ ಮತ್ತು ತುಳು ಸೇರಿದಂತೆ ಎಲ್ಲ ಭಾಷೆಯ ಜನರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಪಕ್ಕದ ಕಾಸರಗೋಡಿನ ಜನರನ್ನು ಒಂದೇ ತಾಯಿಯ ಮಕ್ಕಳ ರೀತಿಯಲ್ಲಿ ಸ್ವೀಕರಿಸಿದ್ದೇವೆ. ಬಾಂಧವ್ಯಕ್ಕೆ ಕರಾವಳಿ ಜನರು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
 ಬಂಟರ ಸಂಘದ ಸದ್ಯಸ ಉದಯ್ ಧರ್ಮಸ್ಥಳ ಮಾತನಾಡಿ, ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ತುಳು ಭಾಷೆಯನ್ನು 8ನೆ ಅಧಿಕೃತ ಭಾಷೆಯನ್ನಾಗಿ ಮಾಡಲು ಸರಕಾರವು ಕೂಡಲೇ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಮುಂಬರುವ ಅಧಿವೇಶನದಲ್ಲಿ ರಾಜ್ಯದ ಎಲ್ಲ ವಿಧಾನ ಸಭೆ ಮತ್ತು ವಿಧಾನಪರಿಷತ್ ಸದಸ್ಯರು ತುಳು ಭಾಷೆಯು ಅಧಿಕೃತ ಭಾಷೆ ಎಂದು ನಿರ್ಣಯ ಕೈಗೊಳ್ಳಬೇಕು. ಈ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
 ಈಗಾಗಲೇ ಕೇರಳದಲ್ಲಿ ತುಳು ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರಿಂದ ನಮ್ಮ ಬೇಡಿಕೆ ಈಡೇರಿದರೆ ತುಳು ಜನರ ಒಲವು ಕೇರಳದತ್ತ ಮುಖ ಮಾಡಬಹುದು. ಆದರಿಂದ ಸರಕಾರವು ಇಂತಹ ಅನಾಹುತ ಸಂಭವಿಸುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಂ.ಕೃಷ್ಣಪ್ಪ, ಸಂಘದ ಅಧ್ಯಕ್ಷ ಡಾ.ನರೇಶ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News