ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ: ಡಾ.ಹನುಮಂತಯ್ಯ

Update: 2016-01-02 17:43 GMT

ಬೆಂಗಳೂರು, ಜ. 2: ವೈದ್ಯ ಕೀಯ, ದಂತ ವೈದ್ಯಕೀಯ, ಎಂಜಿ ನಿಯರಿಂಗ್ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಎರಡು ಸೆಮಿಸ್ಟರ್ ಕನ್ನಡ ವ್ಯಾಸಂಗ ಕಡ್ಡಾಯ ಗೊಳಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಹೇಳಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಹೊರ ರಾಜ್ಯಗಳ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2015-16ನೆ ಸಾಲಿನ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ರಾಂತ ಕುಲಪತಿ ಪ್ರೊ.ಬೋರಲಿಂಗಯ್ಯ ನೇತೃತ್ವದ ಸಮಿತಿ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಸಂಬಂಧ ವರದಿ ಸಿದ್ಧಪಡಿಸಿದ್ದು, ಅದನ್ನು ಸಿಎಂಗೆ ಸಲ್ಲಿಸಲಾಗುವುದು ಎಂದು ನುಡಿದರು.
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉನ್ನತ ಶಿಕ್ಷಣದಲ್ಲಿ ಶೇ.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದು, ಇದನ್ನು ಉದ್ಯೋಗದಲ್ಲಿಯೂ ಅನುಷ್ಠಾನಗೊಳಿಸಬೇಕು ಎಂದ ಅವರು, ಇದರಿಂದ ಗಡಿನಾಡು ಮತ್ತು ಹೊರನಾಡಿನಲ್ಲಿ ಕನ್ನಡ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಹೊರ ರಾಜ್ಯಗಳ ವಿವಿಗಳಲ್ಲಿ ಕನ್ನಡ ಅಭ್ಯಾಸ ಮಾಡುವ ಎಂಎ ವಿದ್ಯಾರ್ಥಿಗಳಿಗೆ ಆರು ವರ್ಷಗಳಿಂದ ಮಾಸಿಕ ತಲಾ 2,500 ರೂ., ವಾರ್ಷಿಕ 25 ಸಾವಿರ ರೂ. ನೀಡುತ್ತಿದ್ದು, ಆರು ವರ್ಷಗಳಲ್ಲಿ 557 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಸಾಲಿನಲ್ಲಿ 86 ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ್ದು, ಆ ವಿದ್ಯಾರ್ಥಿಗಳಿಗೆ ಇಂದು ನೆರವು ನೀಡಲಾಗಿದೆ ಎಂದ ಅವರು, ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದರು. ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅನಿವಾಸಿ ಭಾರತೀಯ ಪುರುಷೋತ್ತಮ, ವಿಶ್ರಾಂತ ಕುಲಪತಿ ಪ್ರೊ.ಬೋರಲಿಂಗಯ್ಯ, ಸಾಹಿತಿ ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News