ನೈತಿಕತೆಯಿಲ್ಲದ ಶಿಕ್ಷಣ ವ್ಯರ್ಥ: ನಿರ್ಮಲಾನಂದ ಸ್ವಾಮಿ

Update: 2016-01-02 17:45 GMT

ಬೆಂಗಳೂರು, ಜ.2: ನೈತಿಕತೆ ಹಾಗೂ ಸಾಮಾಜಿಕ ವೌಲ್ಯಗಳನ್ನು ಒಳಗೊಳ್ಳದೆ ಇರುವಂತಹ ಶಿಕ್ಷಣವು ವ್ಯರ್ಥ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದಲ್ಲಿನ ಅಲ್-ಅಮೀನ್ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ತಾರತಮ್ಯಗಳನ್ನು ಶಿಕ್ಷಣದಿಂದ ಹತ್ತಿಕ್ಕಬಹುದು. ಮಾನವನ ವಿಕಸನಕ್ಕೆ ಶಿಕ್ಷಣವೆ ಪ್ರಧಾನ ಅಸ್ತ್ರವಾಗಿದೆ. ಆದುದರಿಂದ, ನೈತಿಕತೆ ಹಾಗೂ ಸಾಮಾಜಿಕ ವೌಲ್ಯಗಳನ್ನು ಹೊಂದಿರುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಹೇಳಿದರು.
 ಭಾರತವು ಮಾನವೀಯತೆ, ವಿಜ್ಞಾನ, ಯೋಗ, ತತ್ವಶಾಸ್ತ್ರ, ಪರಂಪರೆಗಳ ಮೂಲ ಸ್ಥಾನ. ವಿಶ್ವದಲ್ಲಿನ ಎಲ್ಲ ಧರ್ಮಗಳು ಮಾನವೀಯತೆ, ಸೌಹಾರ್ದತೆಯ ಸಂದೇಶವನ್ನು ಸಾರುತ್ತವೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಬಗ್ಗೆ ಸಂಪೂರ್ಣವಾದ ಜ್ಞಾನವನ್ನು ಹೊಂದಿರಬೇಕು. ಆಗ ಮಾತ್ರ ಶಾಂತಿಯುತವಾದ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಡಾ.ಮುಮ್ತಾಝ್ ಅಹ್ಮದ್‌ಖಾನ್ ತಮ್ಮ 29ನೆ ವಯಸ್ಸಿನಲ್ಲಿ ಸಾಮಾಜಿಕ ಕಳಕಳಿಯಿಟ್ಟುಕೊಂಡು ಅಲ್ ಅಮೀನ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಸಮಾಜದಲ್ಲಿ ಶೇ.1ರಷ್ಟು ಜನ ಮಾತ್ರ ಇತಿಹಾಸ ನಿರ್ಮಿಸುತ್ತಾರೆ. ಅಂತಹವರ ಸಾಲಿನಲ್ಲಿ ಮುಮ್ತಾಝ್ ಅಹ್ಮದ್‌ಖಾನ್ ನಿಲ್ಲುತ್ತಾರೆ ಎಂದು ಅವರು ಹೇಳಿದರು.
ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಮಾತನಾಡಿ, ಅಲ್ ಅಮೀನ್ ಶಿಕ್ಷಣ ಸಂಸ್ಥೆಯು ಜಾತಿ, ಧರ್ಮದ ಭೇದಭಾವವಿಲ್ಲದೆ ಸಮಾಜದ ಎಲ್ಲ ವರ್ಗಗಳಿಗೂ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನಾರ್ಹ. ಸಮಾಜದಲ್ಲಿನ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಲ್ಲಿ ಪರಿಹಾರವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶವು ಸ್ವಾತಂತ್ರವನ್ನು ಪಡೆದಾಗ ಕೇವಲ ಸರಕಾರದಿಂದ ಮಾತ್ರ ಎಲ್ಲರಿಗೂ ಶಿಕ್ಷಣ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿಯಿತ್ತು. ಆಗ, ಮಠಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ, ಬಡವರು, ಮಧ್ಯಮ ವರ್ಗದವರಿಗೆ ಶಿಕ್ಷಣ ನೀಡುವ ಕಾಯಕವನ್ನು ಆರಂಭಿಸಿದವು ಎಂದು ಅವರು ಹೇಳಿದರು.
ಆರ್ಷ್ ಬಿಷಪ್ ಡಾ.ಬರ್ನಾಡ್ ಮೋರಸ್ ಮಾತನಾಡಿ, ಭಾರತ ಪರಧರ್ಮ ಸಹಿಷ್ಣುತೆ, ಸಹೋದರತೆಯನ್ನು ಪ್ರತಿಪಾದಿಸುವ ದೇಶ. ಆದರೆ, ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಹಾಗೂ ದ್ವೇಷ ಮನೋಭಾವನೆ ಹೆಚ್ಚಾಗುತ್ತಿದೆ. ಶಾಂತಿಯ ವಾತಾವರಣ ಕಲುಷಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ಧರ್ಮದವರು ತಮ್ಮ ತಮ್ಮ ಧರ್ಮಗಳ ಬಗ್ಗೆ ಅಧ್ಯಯನ ನಡೆಸುವುದರ ಜೊತೆಗೆ ಇತರ ಧರ್ಮಗಳ ಬಗ್ಗೆಯೂ ಅಧ್ಯಯನ ನಡೆಸಿದರೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಆಗ ಮಾತ್ರ ಸುಶಿಕ್ಷಿತವಾದ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವೌಲಾನ ಮುಹಮ್ಮದ್ ಶಾಕೀರ್‌ವುಲ್ಲಾ ರಶಾದಿ, ಅಲ್ ಅಮೀನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಮುಮ್ತಾಝ್ ಅಹ್ಮದ್‌ಖಾನ್, ಕಾರ್ಯದರ್ಶಿ ಸುಭಾನ್ ಶರೀಫ್, ಸೈಯದ್ ಝಮೀರ್ ಪಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News