‘ದೌರ್ಜನ್ಯ ತಡೆಗಟ್ಟಲು ಸರಕಾರಗಳು ವಿಫಲ’

Update: 2016-01-02 17:47 GMT

ಬೆಂಗಳೂರು, ಜ. 2: ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ, ಅವುಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದ್ದು, ದಲಿತ ಚಳವಳಿಯ ನಾಯಕರು ರಾಜಕೀಯ ಹಿತಾಸಕ್ತಿಗೆ ದುರ್ಬಳಕೆ ಆಗುತ್ತಿದ್ದಾರೆ ಎಂದು ಫ್ಯಾಶಿಸ್ಟ್ ವಿರೋಧಿ ಒಕ್ಕೂಟದ ಎಚ್.ಎಸ್.ಮಲ್ಲೇಶ್ ಆರೋಪಿಸಿದ್ದಾರೆ.
ಶನಿವಾರ ಇಲ್ಲಿನ ತಿಲಕ್‌ನಗರದ ಅಂಬೇಡ್ಕರ್ ಪ್ರತಿಮೆ ಬಳಿ ‘ಕೋರೆಗಾಂವ್ ನೆನಪಿನ ದಿನ’ದ ಅಂಗವಾಗಿ ದಲಿತ ಪ್ಯಾಂಥರ್ಸ್‌ ಆಫ್ ಇಂಡಿಯಾ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈಯಕ್ತಿಕ ಹಿತಕ್ಕಾಗಿ ದಲಿತ ಮುಖಂಡರು ದಿಕ್ಕುತಪ್ಪಿದ್ದಾರೆ ಎಂದು ದೂರಿದರು.
ದಲಿತ ಸಮುದಾಯ ಅಂಬೇಡ್ಕರ್ ಆಶಯಗಳನ್ನು ಇಟ್ಟುಕೊಂಡು ಜನರ ಹಿತಕ್ಕಾಗಿ ಹೋರಾಟಗಳನ್ನು ರೂಪಿಸಿದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಬರಲಿದೆ. ಅಲ್ಲದೆ, ಜಾತಿಯ ಅಸಮಾನತೆ, ಅಸ್ಪಶ್ಯತೆ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಸಾಧ್ಯ ಎಂದು ಮಲ್ಲೇಶ್ ನುಡಿದರು.
ಡಿಪಿಐ ಅಧ್ಯಕ್ಷ ನಾಗರಾಜ್ ಮಾತನಾಡಿ, ಕೋರೆಗಾಂವ್ ಯುದ್ಧದಲ್ಲಿ ದಲಿತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಪೇಶ್ವೆಗಳ ವಿರುದ್ಧ ಹೋರಾಡಿದ್ದರಿಂದಾಗಿ ಬ್ರಿಟಿಷರು ನಮ್ಮ ಜನಾಂಗವನ್ನು ಗುರುತಿಸಿದರು ಮತ್ತು ಶಿಕ್ಷಣವನ್ನು ನೀಡಿದರು. ಆದುದರಿಂದ ಅಂಬೇಡ್ಕರ್‌ರಂತಹ ಮಹಾತ್ಮರು ಬೆಳೆಯಲು ಸಾಧ್ಯವಾಯಿತು ಎಂದರು.
ಇಲ್ಲದಿದ್ದರೆ ನಮ್ಮ ಬದುಕು ಯಾವ ಮಟ್ಟದಲ್ಲಿರುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಆದುದರಿಂದ ದಲಿತ ಜನಾಂಗದ ಪ್ರತಿಯೊಬ್ಬರು ಕೋರೆಗಾಂವ್ ವೀರರನ್ನು ನೆನೆಯಬೇಕು. ಮಾತ್ರವಲ್ಲ ಅವರ ಹಾದಿಯಲ್ಲೇ ಶೋಷಣೆಯ ವಿರುದ್ಧ ಉಗ್ರ ಹೋರಾಟ ರೂಪಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜೆವಿವಿಯ ಲಕ್ಷ್ಮಣ್, ಮುಖಂಡರಾದ ರಾಜ್‌ಕುಮಾರ್, ಆರ್.ಶೇಖರ್, ಜ್ಞಾನಮೂರ್ತಿ, ಇ.ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News