ಬಾಷ್ ಕಂಪೆನಿಯ ಹಂಗಾಮಿ ಕಾರ್ಮಿಕರನ್ನು ಖಾಯಂಗೊಳಿಸಿ: ಎಚ್.ಎಸ್.ದೊರೆಸ್ವಾಮಿ

Update: 2016-01-02 17:50 GMT

ಬೆಂಗಳೂರು, ಜ.2: ಬಾಷ್ ಕಂಪೆನಿಯಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿದ್ದ ಹಂಗಾಮಿ ಕಾರ್ಮಿಕರನ್ನು ವಜಾ ಗೊಳಿಸಿರುವುದು ಕಾನೂನುಬಾಹಿರವಾಗಿದ್ದು, ಈ ಕೂಡಲೇ ಅವರನ್ನು ಖಾಯಂಗೊಳಿಸಬೇಕೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದ್ದಾರೆ.
ಬಾಷ್ ಕಂಪೆನಿಯ ಆಡಳಿತ ವರ್ಗ ಕಾನೂನುಬಾಹಿರವಾಗಿ 263 ಹಂಗಾಮಿ ಕಾರ್ಮಿಕರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದ ಅನುಮತಿಯಿಲ್ಲದೆ ಹಂಗಾಮಿ ಕಾರ್ಮಿಕರನ್ನು ವಜಾ ಮಾಡುವ ಹಾಗಿಲ್ಲ. ಆದರೆ, ಬಾಷ್ ಕಂಪೆನಿಯ ಆಡಳಿತ ವರ್ಗವು ಹಂಗಾಮಿ ಕಾರ್ಮಿಕರನ್ನು ವಜಾ ಗೊಳಿಸುವ ಮೂಲಕ ದೇಶದ ಕೈಗಾರಿಕಾ ಕಾನೂನನ್ನು ಉಲ್ಲಂಘನೆ ಮಾಡಿದೆ. ಜರ್ಮನಿ ಮೂಲದ ಬಾಷ್ ಕಂಪೆನಿ ನಮ್ಮ ಸ್ಥಳದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪಡೆದು, ನಮ್ಮ ನೌಕರರನ್ನು ಬೀದಿಪಾಲು ಮಾಡುತ್ತಿದೆ. ಬಾಷ್ ಕಂಪೆನಿಯ ಈ ಕ್ರಮವನ್ನು ಕಾರ್ಮಿಕ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕೆಂದು ಅವರು ಸಲಹೆ ನೀಡಿದರು.
ದೇಶದಲ್ಲಿ ಬೃಹತ್ ಕಂಪೆನಿಗಳು ಸ್ಥಾಪನೆಯಾಗುತ್ತಿದ್ದು, ಅಲ್ಲಿ ಕಾರ್ಮಿಕರ ಬದಲಿಗೆ ಬೃಹತ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಪಂಚದಲ್ಲಿಯೆ ಎರಡನೆ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಬೃಹತ್ ಯಂತ್ರಗಳಿಂದಾಗಿ ಪ್ರತಿನಿತ್ಯ ಸಾವಿರಾರು ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾರ್ಮಿಕರ ವೃತ್ತಿ ಭದ್ರತೆಗೆ ಸಂಬಂಧಿಸಿದಂತೆ ಸರಕಾರ ಗಂಭೀರವಾಗಿ ಚಿಂತಿಸಬೇಕೆಂದು ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದರು.
ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ಮಾತನಾಡಿ, ಇಂದು ದೇಶದಲ್ಲಿ ಕಾರ್ಮಿಕರು ತೀವ್ರ ಆತಂಕದ ದಿನಗಳನ್ನು ಎದುರಿಸುತ್ತಿದ್ದು, ಆಧುನೀಕರಣ ಕಾರ್ಮಿಕರಿಗೆ ಶಾಪವಾಗಿ ಪರಿಣಮಿಸಿದೆ. ಕಂಪೆನಿಗಳ ಮಾಲಕರಿಗೆ ಜೀವ ಇರುವ ಕಾರ್ಮಿಕರಿಗಿಂತ ಜೀವವಿಲ್ಲದ ಬೃಹತ್ ಯಂತ್ರಗಳು ಬೇಕಾಗಿದೆ. ಇದರಿಂದಾಗಿ ಪ್ರತಿದಿನ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಬಾಷ್ ಕಂಪೆನಿಯ ಬೆಳವಣಿಗೆಗಾಗಿ ಕಾರ್ಮಿಕರು ತಮ್ಮ ಜೀವವನ್ನೆ ತೆತ್ತಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಕಂಪೆನಿಯ ಆಡಳಿತ ಮಂಡಳಿ ಕಾರ್ಮಿಕರ ಬದುಕನ್ನು ನಾಶ ಮಾಡುವಂತಹ ಬಹುಮಾನ ನೀಡಿದೆ. ಕಾರ್ಮಿಕರ ಕಷ್ಟವನ್ನು ಕಾರ್ಮಿಕರೆ ಅರ್ಥ ಮಾಡಿಕೊಳ್ಳಲು ಸಾಧ್ಯವೆಂದು ಕಂಪೆನಿ ಮಾಲಕರು ಸಾಬೀತುಪಡಿಸಿದ್ದಾರೆ. ಹೀಗಾಗಿ ದೇಶದ ಎಲ್ಲ ಕಾರ್ಮಿಕರು ಒಟ್ಟಾಗಬೇಕೆಂದು ಕರೆ ನೀಡಿದರು.
ಬಾಷ್ ಕಂಪೆನಿಯ ಹಂಗಾಮಿ ಕಾರ್ಮಿಕರ ಪರವಾಗಿ ರಾಜ್ಯದ ಎಲ್ಲ ಕಾರ್ಮಿಕರ ಸಂಘಟನೆಯ ಕಾರ್ಮಿಕರು ಒಂದಾಗಬೇಕು. ಹಂಗಾಮಿ ಕಾರ್ಮಿಕರನ್ನು ಖಾಯಂ ಗೊಳಿಸುವವರೆಗೂ ಹೋರಾಟವನ್ನು ಹಿಂಪಡೆಯದಂತೆ ಶಪಥ ಮಾಡಬೇಕೆಂದು ಅವರು ಕಾರ್ಮಿಕರಲ್ಲಿ ಮನವಿ ಮಾಡಿದರು.
ಈ ಸಮಾವೇಶದಲ್ಲಿ ಕಾರ್ಮಿಕ ಮುಖಂಡರಾದ ವಿ.ಜೆ.ಕೆ.ನಾಯರ್, ಎಸ್.ಬಾಲನ್, ಜಿ.ಆರ್.ಶಿವಶಂಕರ್‌ಮೂರ್ತಿ, ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News