ಜಿಲ್ಲಾ ಹಂತದಲ್ಲೆ ಕೈಗಾರಿಕೆ ಸ್ಥಾಪನೆಗೆ ಮಂಜೂರಾತಿ: ಖಮರುಲ್ ಇಸ್ಲಾಮ್

Update: 2016-01-02 17:50 GMT

ಕಲಬುರಗಿ,ಜ.2: ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿ 2014-19 ರನ್ವಯ 15 ಕೋಟಿ ರೂ.ವರೆಗಿನ ಬಂಡವಾಳ ಹೂಡಿಕೆಯ ಕೈಗಾರಿಕಾ ಸ್ಥಾಪನೆಗಳಿಗೆ ಏಕಗವಾಕ್ಷಿ ಪದ್ಧತಿಯಡಿ (ಸಿಂಗಲ್ ವಿಂಡೊ ಸಿಸ್ಟಮ್) ಜಿಲ್ಲಾ ಮಟ್ಟದ ಹಂತದಲ್ಲೆ ಮಂಜೂರಾತಿ ನೀಡಲಾಗುವುದು ಎಂದು ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಡಾ.ಖಮರುಲ್ ಇಸ್ಲಾಮ್ ತಿಳಿಸಿದ್ದಾರೆ.
ಶನಿವಾರ ಇನ್ವೆಸ್ಟ್ ಕರ್ನಾಟಕ-2016ಕ್ಕೆ ಪೂರಕವಾಗಿ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಹೈದರಾಬಾದ್-ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಅತ್ಯಂತ ವೇಗದಲ್ಲಿ ಪ್ರಗತಿ ಹೊಂದುತ್ತಿರುವ ಮತ್ತು ಕೈಗಾರಿಕಾ ಪರಿಸರವುಳ್ಳ ರಾಜ್ಯ ಕರ್ನಾಟಕವಾಗಿದೆ. ಅದರಲ್ಲೂ ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಬೆಳವಣಿಗೆಗೆ ನೂತನ ಕೈಗಾರಿಕಾ ನೀತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಅವರು ಹೇಳಿದರು.
ಹೈದರಾಬಾದ್-ಕರ್ನಾಟಕ ಭಾಗಕ್ಕೆ 371(ಜೆ) ಅನ್ವಯ ಸಿಗುವ ವಿಶೇಷ ಸವಲತ್ತುಗಳನ್ನು ಬಳಸಿಕೊಂಡು ಇಲ್ಲಿನ ಉದ್ದಿಮೆದಾರರು ಕೈಗಾರಿಕೆ ಸ್ಥಾಪನೆ ಮಾಡುವುದರೊಂದಿಗೆ ಈ ಭಾಗದ ಮತ್ತು ರಾಜ್ಯದ ಪ್ರಗತಿಗೆ ಕಾರಣವಾಗಬೇಕು. ಕೈಗಾರಿಕೆ ಇಲ್ಲದೆ ಯಾವುದೆ ಪ್ರದೇಶ ಸಂಪೂರ್ಣ ಅಭಿವೃದ್ಧಿ ಹೊಂದುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆಯಲ್ಲಿ ಭೂಮಿಯಿಂದ 100 ಅಡಿ ಕೆಳಗಿನವರೆಗೂ ಹೇರಳವಾಗಿ ಸುಣ್ಣದ ಕಲ್ಲು ಲಭ್ಯವಿರುವ ಕಾರಣ ಜಿಲ್ಲೆಯಲ್ಲಿ 9 ಸಿಮೆಂಟ್ ಕಾರ್ಖಾನೆಗಳು ಕಾರ್ಯಗತವಾಗಿವೆ. ಇವುಗಳಿಂದ ಪ್ರಸ್ತುತ ಒಟ್ಟಾರೆ 45 ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆಯಾಗುತ್ತಿದೆ. ಈ ಪ್ರಮಾಣವನ್ನು 100 ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಕಲಬುರಗಿಯ ತೊಗರಿ ಬೇಳೆ ವಿಶ್ವದಲ್ಲಿಯೆ ಉತ್ತಮ ಗುಣಮಟ್ಟದ ಬೆಳೆಯಾಗಿದ್ದು, ಕಲಬುರಗಿಯಲ್ಲಿ ತೊಗರಿ ಪಾರ್ಕ್ ಸ್ಥಾಪನೆಗೆ ಭೂಸ್ವಾಧೀನ ಕಾರ್ಯ ಪ್ರಗತಿಯಲ್ಲಿದೆ. ಫೆ.3 ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯುವ ಇನ್ವೆಸ್ಟ್ ಕರ್ನಾಟಕ-2016 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ಕಲಬುರಗಿಯಲ್ಲಿ ಈಗಿರುವ ವರ್ತುಲ ರಸ್ತೆ ಹೊರತುಪಡಿಸಿ ಇನ್ನೊಂದು ವರ್ತುಲ ರಸ್ತೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಎರಡನೆ ವರ್ತುಲ ರಸ್ತೆ ಒಟ್ಟು 46 ಕಿ.ಮೀ. ಇದ್ದು, ಇದರಲ್ಲಿ 36 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರ ಮಂಜೂರಾತಿ ನೀಡಿದೆ. ಉಳಿದ ರಸ್ತೆಯನ್ನು ರಾಜ್ಯ ಸರಕಾರದಿಂದ ನಿರ್ಮಿಸಲಾಗುವುದು ಎಂದು ಖಮರುಲ್ ಇಸ್ಲಾಮ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕ ಡಾ.ಉಮೇಶ್ ಜಾಧವ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತೀನ್ ವಿ.ಗುತ್ತೇದಾರ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಮೇಯರ್ ಭೀಮರೆಡ್ಡಿ ಪಾಟೀಲ್ ಕುರಕುಂದಾ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸ್ಗರ್ ಚುಲ್ಬುಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News