ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

Update: 2016-01-02 17:55 GMT

ಬೆಂಗಳೂರು, ಜ. 2: ಬಡವರಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಮೀಸಲಿಟ್ಟಿದ್ದ 5 ಸಾವಿರ ಕೋಟಿ ರೂ.ವೌಲ್ಯದ 76 ಎಕರೆ ಭೂಮಿಯಲ್ಲಿ ಬಡಾವಣೆ ನಿರ್ಮಿಸಿ ವಂಚಿಸಿರುವ ಎಂ.ಎಸ್.ರಾಮಯ್ಯ ಕುಟುಂಬದ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಸಿಬಿಐ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಬಿಡಿಎ ಚಿಕ್ಕಮಾರನಹಳ್ಳಿ, ಮತ್ತಿಕೆರೆ, ದ್ಯಾವಸಂದ್ರ ಮತ್ತು ಪೂರ್ಣಾಪುರ ಗ್ರಾಮಗಳ ಸರ್ವೆ ನಂಬರ್‌ಗೆ ಸೇರಿದ 76 ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಂಡಿತ್ತು. ಆ ಪ್ರದೇಶದಲ್ಲಿ ರಾಮಯ್ಯ ಕುಟುಂಬ ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ನಿರ್ಮಿಸಿ ಕೊಡುವುದಾಗಿ ಮನವಿ ಮಾಡಿತ್ತು.
1991ರಲ್ಲಿ ಅಂದಿನ ಸರಕಾರ 76.16ಎಕರೆಯನ್ನು ರಾಮಯ್ಯ ಕುಟುಂಬದ 10 ಮಂದಿ ಸದಸ್ಯರಿಗೆ ವರ್ಗಾವಣೆ ಮಾಡಿಕೊಟ್ಟಿತ್ತು. ಈ ಸರಕಾರಿ ಭೂಮಿಯಲ್ಲಿ ಬಿಡಿಎಯಿಂದ ಅನುಮತಿ ಪಡೆದು ಆಸ್ಪತ್ರೆ, ವಿದ್ಯಾಸಂಸ್ಥೆ, ಸಾರ್ವಜನಿಕರಿಗೆ ಅನುಕೂಲವಾಗುವ ಬಡವರಿಗೆ ವಸತಿ ಸಮುಚ್ಚಯ ನಿರ್ಮಿಸಬೇಕೆಂದು ಷರತ್ತು ವಿಧಿಸಿತ್ತು.
ಆದರೆ, ಷರತ್ತು ಉಲ್ಲಂಘಿಸಿ ಬಡಾವಣೆ ನಿರ್ಮಿಸಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ವಂಚನೆ ಮಾಡಲಾಗಿದೆ. ಉಳಿದ ಜಾಗದಲ್ಲಿ ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣ ಸೇರಿದಂತೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಕೋಟ್ಯಂತರ ರೂ. ಅಕ್ರಮದ ಬಗ್ಗೆ ರಾಜ್ಯ ಸರಕಾರ ಎಂ.ಎಸ್.ರಾಮಯ್ಯ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅವರು, ಈ ಸಂಬಂಧ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News