ಮತದಾರರ ಓಲೈಕೆಗೆ ಹಾಲಿನ ದರ ಹೆಚ್ಚಳ: ರೇವಣ್ಣ

Update: 2016-01-02 17:55 GMT

ಬೆಂಗಳೂರು, ಜ. 2: ಗ್ರಾಹಕರು ಹಾಗೂ ಉತ್ಪಾದಕರ ಹಿತವನ್ನು ಕಡೆಗಣಿಸಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮತ ದಾರರನ್ನು ಓಲೈಸಲು ರಾಜ್ಯ ಸರಕಾರ ‘ನಂದಿನಿ ಹಾಲಿನ’ ದರ ಹೆಚ್ಚಳಕ್ಕೆ ಮುಂದಾ ಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಶನಿವಾರ ಇಲ್ಲಿನ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಆ ಹಣವನ್ನು ಹಾಲು ಉತ್ಪಾದಕರಿಗೆ ನೀಡಬೇಕೆಂದು ಇದೇ ವೇಳೆ ಆಗ್ರಹಿಸಿದರು.
ಹಾಲು ಉತ್ಪಾದಕರು ಹಾಗೂ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಲೆ ಏರಿಕೆ ಮಾಡಬೇಕು. ಆದರೆ, ಬೆಂಗಳೂರು ಹಾಲು ಒಕ್ಕೂಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಲಿನ ದರ ಹೆಚ್ಚಳಕ್ಕೆ ಮುಂದಾದರೆ ಗ್ರಾಹಕ ವಿಶ್ವಾಸ ಕಳೆದುಕೊಳ್ಳುವುದಲ್ಲದೆ, ಖಾಸಗಿ ಕಂಪೆನಿಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಎಚ್ಚರಿಸಿದರು.
ಕೆಎಂಎಫ್ ವಾಸ್ತವದಲ್ಲಿ ಉತ್ಪಾದಕರಿಂದ ಹಾಲನ್ನು ಖರೀದಿಸಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ‘ಮಧ್ಯವರ್ತಿಗಳ ಫೆಡರೇಷನ್’ ಆಗಿ ಮಾರ್ಪಟ್ಟಿದೆ ಎಂದು ಟೀಕಿಸಿದ ಅವರು, ಹಾಸನ ಒಕ್ಕೂಟದಲ್ಲಿನ 6ಲಕ್ಷ ಲೀಟರ್ ಹಾಲನ್ನು ಬೆಂಗಳೂರಿನಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಪ್ರತಿ ಲೀ.30ರೂ.ನಂತೆ ಗ್ರಾಹಕರಿಗೆ ನೀಡಲು ಸಿದ್ಧ ಎಂದರು.
ನಂದಿನಿ ಹಾಲಿನ ದರವನ್ನು ಪರಿಷ್ಕರಿಸಿದರೆ ಪ್ರತಿ ಲೀಟರ್‌ಗೆ 42 ರೂ.ಗಳಾಗಲಿದೆ. ಆದರೆ, ಹಾಸನ ಹಾಲು ಒಕ್ಕೂಟದಿಂದ ಸುಮಾರು 85 ಸಾವಿರ ಲೀಟರ್ ಹಾಲನ್ನು ಆಂಧ್ರಕ್ಕೆ ಪ್ರತಿ ಲೀ.20 ರೂ.ನಂತೆ ಕಳುಹಿಸಲಾಗುತ್ತಿದೆ. ಅದೇ ರೀತಿ ಬೆಂಗಳೂರಿನಿಂದ 10 ಸಾವಿರ ಲೀಟರ್ ಹಾಲನ್ನು ಚೆನ್ನೈಗೆ 25 ರೂ.ನಂತೆ ರವಾನಿಸಲಾಗುತ್ತಿದೆ. ಈ ಹಾಲನ್ನು ಆಂಧ್ರದಲ್ಲಿ 35 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿನಿತ್ಯ 67.27 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆ ಪೈಕಿ 38.85 ಲಕ್ಷ ಲೀಟರ್ ಹಾಲು ಮತ್ತು 4ಲಕ್ಷ ಲೀಟರ್ ಮೊಸರು ಮಾರಾಟ ಆಗುತ್ತಿದೆ ಎಂದ ಅವರು, ಪ್ರತಿನಿತ್ಯ 22.51ಲಕ್ಷ ಲೀಟರ್ ಹಾಲು ಉಳಿಯುತ್ತಿದ್ದು, ಅದನ್ನು ಪೌಡರ್ ಮಾಡಲು ಪ್ರತಿ ಲೀ.ಗೆ 8 ರೂ.ವೆಚ್ಚವಾಗುತ್ತದೆ ಎಂದರು. ರಾಜ್ಯದ 13 ಒಕ್ಕೂಟಗಳಲ್ಲಿ ಒಟ್ಟು 27 ಸಾವಿರ ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನಿದ್ದು, ದರ ಕುಸಿತದ ಹಿನ್ನೆಲೆಯಲ್ಲಿ ಹಾಲು ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕಿದ್ದು, ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ನಷ್ಟವನ್ನು ಭರಿಸಬೇಕೆಂದು ಆಗ್ರಹಿಸಿದ ಅವರು, ಈ ಸಂಬಂಧ ಮುಖ್ಯಮಂತ್ರಿಗಳು ಎಲ್ಲ ಒಕ್ಕೂಟಗಳ ಅಧ್ಯಕ್ಷರ ಸಭೆ ನಡೆಸಬೇಕೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News