ವಿಜ್ಞಾನ, ತಂತ್ರಜ್ಞಾನದ ತಳಹದಿಯಲ್ಲಿ ಸಂಸ್ಕೃತಿ ಉಳಿಯಲಿ: ಪ್ರಧಾನಿ ಮೋದಿ

Update: 2016-01-02 18:13 GMT

ಮೈಸೂರು, ಜ.2: ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳ ತಳಹದಿಯಲ್ಲಿ ಭಾರತದ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಠ ಮಾನ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಏಳಿಗೆಗೆ ಸಾಧು-ಸಂತರ ಕೊಡುಗೆಯನ್ನು ಸ್ಮರಿಸಿದರು.

12ನೆ ಶತಮಾನದಲ್ಲೇ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ್ದ ಬಸವೇಶ್ವರರು ಮಹಾನ್ ಸಮಾಜ ಸುಧಾರಕರು. ಇವರ ಪರಂಪರೆಯಲ್ಲಿ ನಡೆದು ಬಂದ ಸುತ್ತೂರು ಸಂಸ್ಥಾನವು ಜ್ಞಾನ ದಾಸೋಹ, ಅನ್ನ ದಾಸೋಹ, ಆರೋಗ್ಯ ದಾಸೋಹದ ಮೂಲಕ ಸರಕಾರ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹಾಗೂ ವಿಜಯಪುರದ ಶ್ರೀ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಿಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವ ಅನಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News