×
Ad

ವೈದ್ಯಕೀಯ ಸೌಲಭ್ಯಗಳು ಬಡವರ ಕೈಗೆಟಕುವಂತಿರಲಿ: ಮುಖ್ಯಮಂತ್ರಿ

Update: 2016-01-03 22:58 IST

ಬೆಂಗಳೂರು, ಜ.3: ವೈದ್ಯಕೀಯ ಸೌಲಭ್ಯಗಳು ಹೆಚ್ಚು ದುಬಾರಿ ಯಾಗುತ್ತಿರುವು ದರಿಂದ ಬಡವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ಆನೇಕಲ್ ತಾಲೂಕಿನ ಜಿಗಣಿಯಲ್ಲಿರುವ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ(ವ್ಯಾಸ)ದಲ್ಲಿ ಆಯೋಜಿಸಲಾಗಿದ್ದ 21ನೆ ಅಂತಾರಾಷ್ಟ್ರೀಯ ಯೋಗ ಸಂಶೋಧನೆ ಬಳಕೆ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಸಮ್ಮೇಳನದಲ್ಲಿ ಪ್ರಮುಖವಾಗಿ ಮಧುಮೇಹ, ಮಾನಸಿಕ ಒತ್ತಡ, ಆನ್‌ಕಾಲಜಿ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಿಂದ ಆಗಮಿಸಿರುವ ಸಂಶೋಧಕರು, ವೈದ್ಯರು ಚರ್ಚೆ ನಡೆಸಲಿದ್ದಾರೆ. ನಿಮ್ಮ ಸಂಶೋಧನೆಗಳು, ಅಧ್ಯಯನಗಳು ಬಡವರಿಗೆ ಸೌಲಭ್ಯಗಳು ಸುಲಭವಾಗಿ ಸಿಗುವ ನಿಟ್ಟಿನಲ್ಲಿರಲಿ ಎಂದು ಅವರು ಆಶಿಸಿದರು.

ವಿಜ್ಞಾನ, ತಂತ್ರಜ್ಞಾನವು ನಮ್ಮನ್ನು ಯಂತ್ರಗಳ ಅವಲಂಬಿಯನ್ನಾಗಿ ಮಾಡಿದೆ. ಅಲ್ಲದೆ, ನಮ್ಮ ಬದಲಾದ ಜೀವನ ಶೈಲಿಯು ಆರೋಗ್ಯದ ಮೇಲೂ ಗಂಭೀರವಾದ ಪರಿಣಾಮ ಬೀರಿದೆ. ಆದುದರಿಂದ, ಆಯುಷ್ ಹಾಗೂ ಇತರ ಆಧುನಿಕ ವೈದ್ಯಕೀಯ ವಿಜ್ಞಾನಗಳು ಪರಸ್ಪರ ಒಂದಾಗಬೇಕಿದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನವು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಮುಖ್ಯಮಂತ್ರಿ ತಿಳಿಸಿದರು.

ವಿಶ್ವ ಸಂಸ್ಥೆಯು ಜೂ.21ರಂದು ವಿಶ್ವ ಯೋಗ ದಿನವನ್ನಾಗಿ ಘೋಷಣೆ ಮಾಡಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ಸಂಗತಿ. ಡಾ.ಎಚ್.ಆರ್.ನಾಗೇಂದ್ರ ಕಳೆದ ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆಯನ್ನು ಸಲ್ಲಿಸಿದ್ದಾರೆ. ವ್ಯಾಸ ಸಂಸ್ಥೆಯು ಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಗ್ರ ಆರೋಗ್ಯ ವ್ಯವಸ್ಥೆಗೆ ಪೂರಕವಾಗಿ ಬಳಸಿಕೊಳ್ಳಲು ಚಿಂತನೆ ನಡೆಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News