×
Ad

‘ಚಿತ್ರಸಂತೆ’ಯಲ್ಲಿ ಕಲಾಕೃತಿಗಳ ಭರ್ಜರಿ ಮಾರಾಟ

Update: 2016-01-03 23:02 IST

ಬೆಂಗಳೂರು, ಜ. 3: ‘ಕಂಬಳದ ಕೋಣ ಗಳನ್ನು ಓಡಿಸುವ ಉತ್ಸಾಹಿ ಯುವಕ... ದೇವಳದ ಮುಂದೆ ಹೂವುಗಳನ್ನು ಹರಡಿಕೊಂಡು ಖರೀದಿದಾರರ ನಿರೀಕ್ಷೆಯಲ್ಲಿ ಕೂತ ಹೂವಾಡಗಿತ್ತಿ...ಮುಸ್ಸಂಜೆಯ ಕೆಂದೂಳಿನಲ್ಲಿ ಎತ್ತಿನಗಾಡಿ ಓಡಿಸುವ ರೈತ... ಭಕ್ತರ ನಿರೀಕ್ಷೆಯಲ್ಲಿ ಧ್ಯಾನಾಸಕ್ತ ಭಂಗಿಯಲ್ಲೆ ಕುಳಿತ ಬುದ್ಧ..ನದಿಯ ದಂಡೆಯಲ್ಲಿ ಬಟ್ಟೆ ತೊಳೆಯುವ ಕೂಲಿ ಮಹಿಳೆ..’
 ಹೀಗೆ ಸಾವಿರಾರು ಕಲಾಕೃತಿಗಳು ನಗರದ ಶಿವಾನಂದ ವೃತ್ತದ ಸಮೀಪದ ಕುಮಾರಕೃಪಾ ರಸ್ತೆಯ ಇಕ್ಕೆಲಗಳಲ್ಲಿ ಕಲಾಸಕ್ತರನ್ನು ಕೈಬೀಸಿ ಕರೆ ಯುತ್ತಿದ್ದ ದೃಶ್ಯ ರವಿವಾರ ಚಿತ್ರಕಲಾ ಪರಿಷತ್ ವತಿಯಿಂದ ಏರ್ಪಡಿಸಿದ್ದ 13ನೆ ‘ಚಿತ್ರಸಂತೆ’ ಯಲ್ಲಿ ಕಂಡಬಂತು. ಹೇಳಿಕೇಳಿ ಸಂತೆ-ಜಾತ್ರೆ ಎಂದರೆ ಅಲ್ಲಿನ ಜನಜಂಗುಳಿ ಸಾಮಾನ್ಯ. ಇಲ್ಲಿಯೂ ಅದಕ್ಕೆ ಹೊರತಾಗೇನು ಇರಲಿಲ್ಲ.
ಹಸ್ತಾಕ್ಷರದ ಚಾಲನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕ್ಯಾನ್ವಾಸ್ ಮೇಲೆ ತಮ್ಮ ಹಸ್ತಾಕ್ಷರಗಳನ್ನು ಮೂಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಲವು ವೈಶಿಷ್ಟಗಳ ಹದಿಮೂರನೆ ಚಿತ್ರಸಂತೆಗೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ.ಪರಮೇಶ್ವರ್, ಅಂತರಾಳದ ಭಾವನೆಗಳನ್ನು ವ್ಯಕ್ತ ಪಡಿಸುವ ಮಾಧ್ಯಮ ಚಿತ್ರಕಲೆ, ಯಾವುದೇ ಕಲಾಕೃತಿಗಳು ಮೇಲ್ನೋಟಕ್ಕೆ ಗಮನ ಸೆಳೆದರೆ ಅದನ್ನು ಅರ್ಥಮಾಡಿಕೊಂಡರೆ ಅದರ ಹಿಂದೆ ಒಂದು ಸಂದೇಶ ಇರುವುದು ಕಲಾಸಕ್ತನ ಅರಿವಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂಕು-ಡೊಂಕುಗಳ ಪ್ರತಿಬಿಂಬ: ಚಿತ್ರಕಲೆ ಸಮಾಜದ ಅಂಕು-ಡೊಂಕುಗಳು ಮತ್ತು ನ್ಯೂನತೆಗಳ ಪ್ರತಿಬಿಂಬ, ಯಾವುದೇ ಒಂದು ಚಿತ್ರ ಕಲಾ ಸೊಬಗಿನ ಜೊತೆಗೆ ವಸ್ತು ಸ್ಥಿತಿಯನ್ನು ಬಿಂಬಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಡಾ.ಜಿ.ಪರಮೇಶ್ವರ್ ವಿಶ್ಲೇಷಿಸಿದರು.
ಕಲಾವಿದನ ಮನಸ್ಸಿನೊಳಗಿನ ಆಲೋ ಚನೆಗಳಿಗೆ ಕುಂಚದ ಮೂಲಕ ಬಣ್ಣಗಳ ಸಂಯೋಜನೆಯಿಂದ ಮೂಡುವ ಕಲೆ ಆತನ ಅಭಿವ್ಯಕ್ತಿ. ಆದರೂ, ಅದಕ್ಕೊಂದು ಸಮಾಜಮುಖಿ ಆಯಾಮವೂ ಇರುತ್ತದೆ ಎಂಬುದನ್ನು ನಾವು ಅರಿಯಬೇಕು ಎಂದು ಪರಮೇಶ್ವರ್ ತಿಳಿಸಿದರು.
ನಮ್ಮ ತಂದೆಯವರೂ ಚಿತ್ರಕಲಾ ಶಿಕ್ಷಕರು. ಹೀಗಾಗಿ ನಾನು ಚಿಕ್ಕಂದಿನಿಂದಲೂ ಚಿತ್ರಕಲೆಯನ್ನು ನೋಡುತ್ತಲೇ ಬೆಳೆದಿದ್ದೇನೆ. ಅದರ ಬಗ್ಗೆ ವಿಶೇಷವಾಗಿ ಆಸಕ್ತಿ ಹೊಂದಿದ್ದೇನೆ ಎಂದ ಅವರು, ಕಲಾವಿದರಿಗೆ ಬೇಡಿಕೆ ಸೃಷ್ಟಿಸುವ ಚಿತ್ರಸಂತೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿರುವುದು ಮಾದರಿ ಎಂದು ಶ್ಲಾಘಿಸಿದರು.
ತೆರೆಯ ಮರೆಯಲ್ಲಿ ಇರುವ ಚಿತ್ರ ಕಲಾವಿದರಲ್ಲಿನ ಪ್ರತಿಭೆ ಅನಾವರಣಕ್ಕೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದ್ದು, ಹದಿಮೂರು ವರ್ಷಗಳಿಂದ ಈ ಸಂತೆ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಹಮ್ಮೆಯ ಸಂಗತಿ. ಚಿತ್ರಕಲಾ ಪರಿಷತ್ ಸಂಸ್ಥೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿರುವುದು ಅಭಿನಂದನೀಯ ಎಂದರು.
ಜನರಿಗಾಗಿ ಕಲೆ:
‘ಮನೆಗೊಂದು ಕಲಾಕೃತಿ’ ಎಂಬ ಘೋಷಣೆಯೊಂದಿಗೆ ಏರ್ಪಡಿಸಿದ್ದ ಚಿತ್ರಸಂತೆಯಲ್ಲಿ ಸಾವಿರದ ಮೂನ್ನೂರಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಅಲ್ಲದೆ, ಮಾರಾಟವನ್ನು ಏರ್ಪಡಿಸಲಾಗಿತ್ತು. ಕಲಾಸಕ್ತರು ತಮಗೆ ಮೆಚ್ಚುಗೆಯಾದ ಕಲಾಕೃತಿಗಳನ್ನು ಖರೀದಿಸುತ್ತಿದ್ದ ಭರಾಟೆ ಜೋರಾಗಿಯೇ ಸಾಗಿತ್ತು. ಕುಮಾರಕೃಪಾ ರಸ್ತೆಯ ಇಕ್ಕೆಲಗಳಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು ಕೇರಳ ಸೇರಿದಂತೆ 16ರಾಜ್ಯಗಳ ಕಲಾವಿದರು ತಮ್ಮ ಸಾಂಪ್ರದಾಯಿಕ ಕಲೆ, ಭಾವಚಿತ್ರಗಳು, ತೈಲ ವರ್ಣದ ಚಿತ್ರಗಳು, ಕ್ಯಾನ್ವಸ್ ಚಿತ್ರಗಳು, ಪರಿಸರದ ಕಲಾಕೃತಿಗಳು ಸೇರಿದಂತೆ ಕಣ್ಮನ ತಣಿಸುವ ಬಣ್ಣ-ಬಣ್ಣದ, ರಂಗು-ರಂಗಿನ ಚಿತ್ರ- ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿದ್ದವು.
 ಕಾರ್ಯಕ್ರಮದಲ್ಲಿ ಹಿರಿಯ ಕಲಾ ವಿದರಾದ ಜೈದೇವ್, ಎಂ.ಜಿ.ಕಮಲಾಕ್ಷಿ, ಅನಿತಾ ಚೌಡಾಪುರ, ಹೇಮಾ ಶೇಖರ್, ಪ್ರಭಾಮೂರ್ತಿ ಅವರನ್ನು ಗೌರವಿಸಲಾಯಿತು. ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷೆ ರಾಣಿ ಸತೀಶ್, ಗೃಹ ಮಂಡಳಿ ಅಧ್ಯಕ್ಷ ನಂಜಯ ಮಠ್ ಸೇರಿದಂತೆ ಪರಿಷತ್‌ನ ನೂರಾರು ಕಲಾವಿದರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News