ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ: ಸಚಿವ ಶಾಮನೂರು
ಬೆಂಗಳೂರು, ಜ. 3: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಅಭ್ಯಾಸ ಮಾಡುವ ವೀರಶೈವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ವೀರಶೈವ ಮಹಾ ಸಭಾದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನ ಅತ್ಯಂತ ಕಡಿಮೆ. ಇದನ್ನು ಕೂಡಲೇ ಹೆಚ್ಚಿಸಬೇಕು ಎಂದು ಕೋರಿದರು.
ಸಮುದಾಯದ ಎಲ್ಲ ಮುಖಂಡರು ಒಗ್ಗೂಡಿ ವೀರಶೈವ ಜನಾಂಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ನೆರವು ನೀಡುವ ದೃಷ್ಟಿಯಿಂದ ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿ ಇರಿಸಿ ಆ ಮೊತ್ತದಿಂದ ಬರುವ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಸೂಚಿಸಿದರು.
ವೀರಶೈವ ಜನಾಂಗದ ಪ್ರಮುಖರು ತಮ್ಮ ಒಡೆತನದ ಎರಡು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು, ಆ ಜಮೀನಿನಲ್ಲಿ ಮುಂಬರುವ ದಿನಗಳಲ್ಲಿ ವೀರಶೈವ ಮಹಾ ಸಭಾದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ವೈದ್ಯಕೀಯ, ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಾ ಸಭಾ ಮುಖಂಡರಾದ ಎನ್.ತಿಪ್ಪಣ್ಣ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಬಿ.ಎಸ್.ಪರಮಶಿವಯ್ಯ, ಸುನಂದಾ ಗಿರೀಶ್, ವಾಗೀಶ್ ಪ್ರಸಾದ್ ಉಪಸ್ಥಿತರಿದ್ದರು.