×
Ad

ಭಾಷೆ, ಜಾತಿ ಆಧಾರದಲ್ಲಿ ವೈಮನಸ್ಸುಗಳು ಸೃಷ್ಟಿ: ಸಚಿವ ಡಿವಿ

Update: 2016-01-03 23:12 IST

‘ಕಡಲತಡಿಯ ಸಮಾಗಮ’ ಕಾರ್ಯಕ್ರಮ ಸಮಾರೋಪ
ಬೆಂಗಳೂರು, ಜ.3: ಪ್ರಸ್ತುತ ಸಮಾಜದಲ್ಲಿ ಭಾಷೆ ಹಾಗೂ ಜಾತಿ ಆಧಾರದಲ್ಲಿ ವೈಮನಸ್ಸುಗಳು ಸೃಷ್ಟಿ ಯಾಗುತ್ತಿದ್ದು, ಯುವ ಮನಸ್ಸುಗಳು ಇವುಗಳನ್ನು ಹೋಗಲಾಡಿಸಿ ಸಾಮರಸ್ಯ ಮೂಡಿಸಬೇಕೆಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
  ರವಿವಾರ ನಗರದಲ್ಲಿ ಬೆಂಗಳೂರು ವಿಭಾಗದ ಬಂಟರ ಸಂಘ ಆಯೋಜಿಸಿದ್ದ ಎರಡು ದಿನಗಳ ‘ಕಡಲತಡಿಯ ಸಮಾಗಮ’ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
   ದೇಶ ಸಾಮರಸ್ಯ ಹಾಗೂ ಸಮೃದ್ಧಿಯಿಂದಿರಲು ಸಮಾಜ, ಸಂಸ್ಕೃತಿ, ಪ್ರೀತಿ ಹಾಗೂ ವಿಶ್ವಾಸ ನಾಲ್ಕು ಆಧಾರ ಸ್ಥಂಭಗಳಿದ್ದಂತೆ. ಇಡೀ ದೇಶದಲ್ಲಿ ನೂರಾರು ಆಚಾರ-ವಿಚಾರ, ನಡವಳಿಕೆಗಳಿದ್ದರೂ ಈ ನಾಲ್ಕು ಆಧಾರ ಸ್ಥಂಭಗಳು ವೈವಿದ್ಯತೆಯಲ್ಲಿ ಏಕತೆ ಮೆರೆಯುವಂತೆ ಮಾಡುತ್ತಿವೆ. ಆದರೆ, ಎಲ್ಲೋ ಒಂದು ಕಡೆ ಭಾಷೆ ಹಾಗೂ ಜಾತಿ ಆಧಾರದಲ್ಲಿ ವೈಮನಸ್ಯ ಸೃಷ್ಟಿಯಾಗುತ್ತಿವೆ. ಇದನ್ನು ಹೋಗಲಾಡಿಸಲು ಯುವಕರು ಒಂದಾಗಬೇಕು. ಬಂಟರ ಸಂಘದ ಯುವ ವಿಭಾಗ ಇಡೀ ಕಡಲ ತೀರದ ಜನರನ್ನು ಒಗ್ಗೂಡಿಸುವ ಮೂಲಕ ಆ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಕರಾವಳಿ ಭಾಗದಲ್ಲಿ ಪ್ರತಿಯೊಂದು ಜಾತಿಗೂ ಬಲಿಷ್ಠವಾದ ಸಂಘ ಸಂಸ್ಥೆಗಳಿವೆ. ಎಲ್ಲ ಸಂಘಗಳೂ ಕರಾವಳಿಯ ಏಕತೆಗೆ ಒತ್ತುಕೊಟ್ಟು ಕಾರ್ಯಕ್ರಮಗಳನ್ನು ಮಾಡುತ್ತವೆ. ಬಂಟರ ಸಂಘವು ಯಕ್ಷಗಾನ, ನಾಗಪೂಜೆ, ಕರಾವಳಿ ಕರ್ನಾಟಕದ ತಿಂಡಿ ತಿನಿಸುಗಳ ಆಹಾರ ಮೇಳ ಇವೆಲ್ಲವನ್ನೂ ಮಾಡುವ ಮೂಲಕ ಇಡೀ ಕರಾವಳಿಯನ್ನು ಒಟ್ಟುಗೂಡಿಸಿದೆ ಎಂದು ಅಭಿನಂದಿಸಿದರು.
ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ರಮಾನಾಥರೈ ಮಾತನಾಡಿದರು.
ಕರಾವಳಿ ಕಲಶ ಪ್ರಶಸ್ತಿ:     ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ, ಜಾನಪದ ಗಾಯಕಿ ಗಿಡಿಗೆರೆ ರಾಮಕ್ಕ, ಚಿತ್ರ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ, ಉದ್ಯಮಿ ಸದಾನಂದ ಮಯ್ಯ, ಸಮಾಜ ಸೇವಕ ಹಾಗೂ ಉದ್ಯಮಿ ಆನಂದ ಕುಂದರ್ ಅವರಿಗೆ ‘ಕರಾವಳಿ ಕಲಶ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
  ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಉದ್ಯಮಿ ಕೆ.ಪ್ರಕಾಶ್‌ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ.ನರೇಶ್‌ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀಧರ ಹೆಗ್ಡೆ, ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ದೀಪ್‌ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News