×
Ad

ಫೆಬ್ರವರಿಯಲ್ಲಿ ಜಿಪಂ, ತಾಪಂ ಚುನಾವಣೆ:

Update: 2016-01-03 23:44 IST

ಜ.11ರಂದು ಅಧಿಸೂಚನೆ ಪ್ರಕಟ ಸಾಧ್ಯತೆ
ಬೆಂಗಳೂರು, ಜ.3: ಮುಂಬರಲಿರುವ 2018ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ‘ಮಹತ್ವ’ದ ಜಿಲ್ಲಾ-ತಾಲೂಕು ಪಂಚಾಯತ್‌ಗಳ ಚುನಾವಣೆ ಫೆಬ್ರವರಿ ಮೊದಲನೆ ವಾರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.

ಹೀಗಾಗಿ ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ರಾಜಕೀಯ ಚಟು ವಟಿಕೆಗಳು ಬಿರುಸುಗೊಂಡಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸ್ಪರ್ಧಾಕಾಂಕ್ಷಿಗಳು ರಾಜಕೀಯ ಪಕ್ಷಗಳ ಕಚೇರಿಗಳನ್ನು ಸುತ್ತುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಜ.11 ರಂದು ಅಧಿಸೂಚನೆ ಪ್ರಕಟಿಸುವ ಸಾಧ್ಯತೆಯಿದ್ದು, ಫೆಬ್ರವರಿ ಮೊದಲ ಮತ್ತು ಎರಡನೆ ವಾರಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಕೈಗೊಂಡಿದೆ ಎಂದು ತಿಳಿದುಬಂದಿದೆ.


ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿರುವ ಆಡಳಿತಾರೂಢ ಕಾಂಗ್ರೆಸ್ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಪ್ರಾಬಲ್ಯ ಮೆರೆಯಲು ಪಣತೊಟ್ಟಿದೆ. ಈ ಮಧ್ಯೆ ವಿಪಕ್ಷ ಬಿಜೆಪಿ-ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೈಕೊಡವಿ ಎದ್ದು ನಿಂತಿವೆ.


ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ ದೃಷ್ಟಿಯಿಂದ ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನ ಹಾಗೂ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸುವ ‘ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ’ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ ಚುನಾವಣಾ ಆಖಾಡಕ್ಕಿಳಿಯಲಿದೆ.


ಈ ಮಧ್ಯೆ ವಿರೋಧ ಪಕ್ಷಗಳು ರೈತರ ಸರಣಿ ಆತ್ಮಹತ್ಯೆ, ಬರ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಸನ್ನದ್ಧವಾಗಿವೆ. ಹೀಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ.


ರಾಜ್ಯದಲ್ಲಿನ ಮೂವತ್ತು ಜಿಲ್ಲಾ ಪಂಚಾಯತ್‌ಗಳ 1,083 ಸ್ಥಾನಗಳು, 176 ತಾಲೂಕುಗಳ 3,902 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮೀಸಲು ಸ್ಥಾನಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ.


ತಳಮಟ್ಟದಿಂದ ಪಕ್ಷ ಸಂಘಟನೆ ಹಾಗೂ ಭವಿಷ್ಯದ ಚುನಾವಣೆಗಳಿಗೆ ಮತ ಗಳಿಕೆ ವೇದಿಕೆ ಎಂದೇ ಹೇಳಲಾಗುವ ಜಿ.ಪಂ. ಮತ್ತು ತಾಪಂ ಚುನಾವಣೆಗಳ ಮೂರು ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ದಕ್ಕಲಿರುವ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಸ್ಪರ್ಧಾಕಾಂಕ್ಷಿಗಳ ಲಾಬಿಯೂ ಆರಂಭವಾಗಿದೆ.


 ರಾಜ್ಯದಲ್ಲಿನ ಮೂವತ್ತು ಜಿಲ್ಲಾ ಪಂಚಾಯತ್‌ನ 1,083 ಸ್ಥಾನಗಳು, 176 ತಾಲೂಕುಗಳ 3,902 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೀಸಲು ಸ್ಥಾನಗಳನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ.


ಬೇರುಮಟ್ಟದಿಂದ ಪಕ್ಷ ಸಂಘಟನೆ ಹಾಗೂ ಭವಿಷ್ಯದ ಚುನಾವಣೆಗಳಿಗೆ ಮತ ಗಳಿಕೆ ವೇದಿಕೆ ಎಂದೇ ಹೇಳಲಾಗುವ ಜಿ.ಪಂ. ಮತ್ತು ತಾ.ಪಂ.ಚುನಾವಣೆಯನ್ನು ಮೂರೂ ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ದಕ್ಕಲಿರುವ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಸ್ಪರ್ಧಾಕಾಂಕ್ಷಿಗಳ ಲಾಬಿಯೂ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News